Shivamogga | ಯುವನಿಧಿ ಸೌಲಭ್ಯಕ್ಕಾಗಿ ಹೆಸರು ನೋಂದಾಯಿಸಲು ಡಿಸಿ ಡಾ|| ಆರ್.ಸೆಲ್ವಮಣಿ ಸೂಚನೆ

0 250

ಶಿವಮೊಗ್ಗ : ಕೈಗಾರಿಕಾ ಮತ್ತು ತರಬೇತಿ ಇಲಾಖೆಯು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ, ಡಿಪ್ಲೋಮಾ ಪಡೆದ ನಿರುದ್ಯೋಗಿಗಳು ತಮ್ಮ ಪದವಿಯ ನಂತರ 180ದಿನಗಳು ಕಳೆದ ನಂತರವೂ ಉದ್ಯೋಗ ಪಡೆಯದ ನಿರುದ್ಯೋಗಿಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಯಡಿ (Yuvanidhi Scheme) ನಿರುದ್ಯೋಗ ಭತ್ಯೆ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹರಾದ ಜಿಲ್ಲೆಯ ನಿರುದ್ಯೋಗಿ ಯುವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಯುವನಿಧಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪದವಿ, ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರಿಗಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಪದವಿ, ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿ ಹಿಂದಿನ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಪ್ರಸ್ತುತ ನಿರುದ್ಯೋಗಿಗಳಾಗಿರುವ ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಮಾಹಿತಿ ನೀಡುವಂತೆ ಅವರು ಸೂಚಿಸಿದ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂಧಿಗಳು ಮಾಹಿತಿ ನೀಡುವಂತೆ ಸೂಚಿಸಿದರು.

ಅದಕ್ಕಾಗಿ ಶಾಲೆ-ಕಾಲೇಜು ಹಂತದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಪ್ಲೇಸ್‍ಮೆಂಟ್ ಸೆಲ್‍ನ ನಿರ್ವಾಹಕರು ವಿಶೇಷ ಗಮನಹರಿಸುವಂತೆ ಅವರು ಸೂಚಿಸಿದರು. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಸೌಲಭ್ಯದ ದುರುಪಯೋಗಪಡಿಸಿಕೊಂಡಲ್ಲಿ ಅಂತಹವರನ್ನು ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದಲ್ಲದೆ ಹಣವನ್ನು ಬಡ್ಡಿಸಹಿತ ವಸೂಲಾತಿಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾಗಿರುವ ವೃತ್ತಿಪರ ಕೋರ್ಸುಗಳು ಸೇರಿದಂತೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000ರೂ. ಹಾಗೂ ಡಿಪ್ಲೋಮಾ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1,500/-ರೂ. ಗಳ ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2ವರ್ಷಗಳ ಕಾಲ ನೀಡಲಾಗುವುದು ಎಂದರು.

ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸಿರುವವರು, ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಅಪ್ರೆಂಟಿಸ್ ವೇತನವನ್ನು ಪಡೆಯುತ್ತಿರುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಖಲಂದರ್‍ಖಾನ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!