ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರವಾದ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶತಮಾನಕ್ಕೂ ಹಳೆಯದಾದ ಮೇಗರವಳ್ಳಿ ಸಮೀಪದ ಅಣ್ಣುವಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿ ಮತ್ತು ಹಳ್ಳದ ಕಾಲುಸೇತುವೆಯನ್ನು ಕಳೆದ ನಾಲ್ಕೈದು ವರ್ಷಗಳಿಂದ ಬಂದ್ ಮಾಡಲಾಗಿದೆ. ಪ್ರಸ್ತುತ ಸುಮಾರು 3-4 ಕಿ.ಮೀ. ದೂರ ಕ್ರಮಿಸಿ ಮೇಗರವಳ್ಳಿ ತಲುಪಬೇಕಾಗಿದೆ.
ಇದರಿಂದ ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ದಾರಿಯನ್ನು ಕಲ್ಪಿಸಿಕೊಡುವಂತೆ ಕೋರಿದರೂ ಈವರೆಗೂ ನಮ್ಮ ಸಮಸ್ಯೆಗೆ ಪರಿಹಾರ ದೊರಕಿರುವುದಿಲ್ಲ. ಅಲ್ಲದೇ ಅಣ್ಣುವಳ್ಳಿಯಿಂದ ಮೇಗರವಳ್ಳಿಗೆ ಸಂಪರ್ಕ ಕಲ್ಪಿಸುವ ಕೆಳಗಿನ ಅಣ್ಣುವಳ್ಳಿ ರಸ್ತೆ ಕಳೆದ 10 ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಬಗ್ಗೆಯೂ ಸಹ ಸಾಕಷ್ಟು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ರಸ್ತೆಯನ್ನು ದುರಸ್ತಿ ಪಡಿಸಿರುವುದಿಲ್ಲ. ಈ ಕಾರಣದಿಂದ ಈ ಬಾರಿಯ ವಿಧಾನಸಭಾ ಚುನಾವಣೆ ಮತದಾನವನ್ನು ಅಣ್ಣುವಳ್ಳಿ ಗ್ರಾಮಸ್ಥರು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.
ಅಣುವಳ್ಳಿಯಲ್ಲಿ 30 ಕ್ಕೂ ಹೆಚ್ಚು ಮನೆಗಳಿದ್ದು 200 ಕ್ಕೂ ಹೆಚ್ಚು ಮತಗಳಿವೆ. ಗ್ರಾಮಸ್ಥರ ಬೇಡಿಕೆ ಈಡೇರುವವರೆಗೂ ಮತ ಕೇಳಲೂ ಬರಬೇಡಿ. ಯಾವುದೇ ರಾಜಿ ಸಂಧಾನ ಮನವೊಲಿಕೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.