ಸೊರಬ ಕ್ಷೇತ್ರದಲ್ಲಿ ಜನ ಜಾಗೃತಿ‌ ಪಾದಯಾತ್ರೆ ; ಜೆಡಿಎಸ್ ಸೊರಬ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಬಾಸೂರು ಚಂದ್ರೇಗೌಡ ನೇತೃತ್ವ

0 32

ಸೊರಬ : ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೀಡಿದ ಜನಪರ ಯೋಜನೆಗಳನ್ನು ಜನತೆ ಇಂದಿಗೂ ಸ್ಮರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತ್ಯಜಿಸಿ ಜೆಡಿಎಸ್ ಪಕ್ಷವನ್ನು ಜನತೆ ಕೈ ಹಿಡಿಯಲಿದ್ದಾರೆ ಎಂದು ಜೆಡಿಎಸ್ ಸೊರಬ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಹೇಳಿದರು.

ಸೊರಬ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ತಟ್ಟೆಗುಂಡಿ ಗ್ರಾಮದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಬುಧವಾರ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಪಾದಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಜನತೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಂಜುಂಡಪ್ಪ ವರದಿಯಂತೆ ಕ್ಷೇತ್ರ ಇಂದಿಗೂ ಸಹ ಹಿಂದುಳಿದ ತಾಲೂಕಾಗಿದ್ದು, ಆಸ್ಪತ್ರೆ, ಶಿಕ್ಷಣ, ಉದ್ಯೋಗ, ಶಾಶ್ವತ ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಾಲೂಕು ಹಿಂದುಳಿದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರು ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರ ಸ್ವಾಮಿಯವರು ರೈತರ ಸುಮಾರು 26ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ರಾಜ್ಯದಲ್ಲಿ ಕುಮಾರ ಸ್ವಾಮಿಯವರ ಆಡಳಿತವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ಕಾಲ ಎನ್ನಬಹುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರದಲಿದೆ. ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದ ಅವರು, ತಾವು ಕಳೆದ ಫೆ.6ರಿಂದ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಜನತೆಯಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸೊರಬದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್. ಕುಮಾರ್ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ, ಪ್ರತಿ ಹೋಬಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಉತ್ತಮ ಶಾಲೆ ಸೇರಿದಂತೆ ರೈತರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಕುಮಾರ ಸ್ವಾಮಿಯವರು ಈಗಾಗಲೇ ರೂಪಿಸಿಕೊಂಡಿದ್ದು, ಜೆಡಿಎಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಸಾಗರ ತಾಲೂಕು ಜೆಡಿಎಸ್ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ, ತಾಳಗುಪ್ಪ ಹೋಬಳಿ ಅಧ್ಯಕ್ಷ ಮನೋಹರ ಕುಗ್ವಿ, ಸೊರಬ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಹನುಮಂತಪ್ಪ, ಅಲ್ಪ ಸಂಖ್ಯಾತ ತಾಲೂಕು ಘಟಕದ ಅಧ್ಯಕ್ಷ ಅಜೀಜ್ ಸಾಹೇಬ್, ಸೊರಬ ಟೌನ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಆರ್. ಕುಮಾರ್, ಮುಖ್ಯಂಡರಾದ ಮೈಲಪ್ಪ, ಅಶೋಕ್ ಪಾಟೀಲ್, ವೀರಭದ್ರಪ್ಪ ಉಳವಿ, ಗಣಪತಿ ಮಂಜಿನಖಾನ್, ದತ್ತೇಶ ಕಾಗೋಡು, ರವಿ ಮತ್ತೂರು, ಸಂಪತ್ ಕುಮಾರ್, ಎಂ.ಐ.ಕೆ. ಸಾಹೇಬ್ ಸಾಗರ, ಸಂತೋಷ್ ಬಾಸೂರು, ಕಿರಣ್ ಬಾಸೂರು, ಇಸ್ಮಾಯಿಲ್ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!