ಪ್ರತಿಮಾಗೆ ಯಾವುದೇ ಬೆದರಿಕೆ ಇರಲಿಲ್ಲ ; ಪ್ರತಿಮಾ ಅತ್ತೆ ಪ್ರತಿಕ್ರಿಯೆ

0 917

ತೀರ್ಥಹಳ್ಳಿ : ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು. ನಮ್ಮ ಫ್ಯಾಮಿಲಿ ತುಂಬಾ ಚೆನ್ನಾಗಿ ಇದ್ವಿ. ಹತ್ತು ದಿನಗಳ ಹಿಂದೆ ಗೃಹ ಪ್ರವೇಶಕ್ಕೆ ಬಂದಿದ್ದರು. ಒಂದು ವಾರ ತೀರ್ಥಹಳ್ಳಿಯಲ್ಲೇ ಇದ್ದರು. ಗೃಹಪ್ರವೇಶ ಮಾಡಿ ಬೆಂಗಳೂರಿಗೆ ತೆರಳಿದ್ದರು. ಪ್ರತಿಮಾ ಅವರ ಅಣ್ಣ ಅಳುತ್ತಾ ಬಂದ ಮೇಲೆ ನಮಗೆ ವಿಚಾರ ಗೊತ್ತಾಯಿತು. ಅವಳದು ತುಂಬಾ ನಗುತ್ತಾ ಇರುವ ಸ್ವಭಾವ ಎಂದು ಪ್ರತಿಮಾ ಅತ್ತೆ ಪ್ರೇಮಾ ಪ್ರತಿಕ್ರಿಯೆ ನೀಡಿದ್ದಾರೆ.

ತೀರ್ಥಹಳ್ಳಿ ಮೂಲದ ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರ ಜೊತೆ ಮಾತನಾಡಿ, ನಿನ್ನೆ ಕೂಡ ಪ್ರತಿಮಾ ಕರೆ ಮಾಡಿದ್ದರು. ಅವರಿಗೆ ಯಾವುದೇ ಬೆದರಿಕೆ ಇರಲಿಲ್ಲ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ಪ್ರತಿಮಾ ವಾಸವಾಗಿದ್ದರು ಎಂದಿದ್ದಾರೆ.

ಪ್ರತಿಮಾ ಅವರ ಪತಿ ರಾಮಣ್ಣ (ಸತ್ಯನಾರಾಯಣ) ಕೃಷಿಕರಾಗಿದ್ದು ಮಗ ಸಹ್ಯಾದ್ರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪಟ್ಟಣದ ಇಂದಾವರದ ತುಂಗಾ ಕಾಲೇಜಿನ ಸಮೀಪದಲ್ಲಿ ಕಳೆದ 15 ದಿನಗಳ ಹಿಂದೆ ಹೊಸಮನೆ ಗೃಹ ಪ್ರವೇಶ ನಡೆಸಿದ್ದರು. ಪ್ರತಿಮಾ ಅವರ ಹತ್ಯೆಯಾಗಿರುವುದು ಆಘಾತ ತಂದಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಪ್ರತಿಮಾ ಸಹೋದರ ಪ್ರತೀಶ್‌ ಬೆಂಗಳೂರಿನಲ್ಲಿಯೇ ವಾಸವಿದ್ದು, ಸಹೋದರಿಗೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಅನುಮಾನಗೊಂಡ ನೆರೆಮನೆಯವರಿಗೆ ತಿಳಿಸಿದಾಗ ಕೊಲೆಯಾಗಿರುವುದು ಬಯಲಾಗಿದೆ.

18 ವರ್ಷದ ಹಿಂದೆಯೇ ತೀರ್ಥಹಳ್ಳಿಯ ಸತ್ಯನಾರಾಯಣ ಅವರೊಂದಿಗೆ ವಿವಾಹವಾಗಿತ್ತು. ಇದರಿಂದ ಪತಿ ಸತ್ಯನಾರಾಯಣ ಅವರು ಮಗನೊಂದಿಗೆ ಊರಿನಲ್ಲಿಯೇ ಇದ್ದರು. ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು ಶಿವಮೊಗ್ಗದಲ್ಲೇ ಕೆಲಸ ಮಾಡುತ್ತಿದ್ದ ಪ್ರತಿಮಾ ಎಂಟು ವರ್ಷದ ಹಿಂದೆ ರಾಮನಗರಕ್ಕೆ ವರ್ಗವಾಗಿ ಬಂದಿದ್ದರು.

ಅಲ್ಲಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗವಾಗಿದ್ದರು. ಬೆಂಗಳೂರಿನಲ್ಲಿಯೇ ಕಚೇರಿ ಇದ್ದುದರಿಂದ ಇಲ್ಲಿಯೇ ನೆಲೆಸಿದ್ದರು. ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.

ಶನಿವಾರವೂ ಕೆಲಸ ಮುಗಿಸಿ ಅಪಾರ್ಟ್‌ಮೆಂಟ್‌ ಬಂದಿದ್ದಾರೆ. ಕಾರು ಚಾಲಕ ಇವರನ್ನು ಬಿಟ್ಟು ವಾಪಾಸ್‌ ಹೋಗಿದ್ಧಾನೆ. ಇದಾದ ಕೆಲ ಹೊತ್ತಿನಲ್ಲಿ ಕೊಲೆ ನಡೆದಿದೆ. ಪ್ರತಿಮಾ ಅವರ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ.

ಶನಿವಾರ ರಾತ್ರಿಯೇ ಸಹೋದರ ಪ್ರತೀಶ್‌ ಕರೆ ಮಾಡಿದ್ದು, ಆಗ ಪ್ರತಿಮಾ ಕರೆ ಸ್ವೀಕರಿಸಿಲ್ಲ. ಕೆಲಸ ಮುಗಿಸಿ ಬಂದಿದ್ದರಿಂದ ಮಲಗಿರಬೇಕು ಎಂದು ಸುಮ್ಮನಾಗಿದ್ದು, ಬೆಳಿಗ್ಗೆಯೂ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಪಕ್ಕದ ಮನೆಯವರಿಗೆ ನೋಡುವಂತೆ ತಿಳಿಸಿದಾಗ ಕಿಟಕಿಯಿಂದ ನೋಡಿದಾಗ ಕೊಲೆಯಾಗಿರುವುದು ಕಂಡು ಬಂದಿತ್ತು. ಬಾಗಿಲು ಕೂಡ ತೆರೆದಿತ್ತು. ಕೂಡಲೇ ಪ್ರತೀಶ್‌ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ ಶಹಪುರ್‌ವಾಡ್‌ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳವನ್ನು ಕರೆಯಿಸಲಾಗಿತ್ತು. ಸಿಸಿ ಕ್ಯಾಮರಾ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ. ಕುಟುಂಬದವರೂ ಆಗಮಿಸಿದ್ದು. ಅವರಿಂದಲೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಪ್ರತಿಮೆ ಒಬ್ಬರೇ ಇದ್ದರು. ಆಗಾಗ ಸಂಬಂಧಿಕರು ಬಂದು ಹೋಗುತ್ತಿದ್ದರು. ಅವರು ಬರುವುದು ತಡವಾಗುತ್ತಿತ್ತು. ಇದರಿಂದ ಹೆಚ್ಚು ನಮ್ಮ ಜತೆ ಮಾತುಕತೆ ಇರಲಿಲ್ಲ. ಆದರೆ ಕೊಲೆಯಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಆಯಾಮದಲ್ಲೂ ಕೊಲೆ ತನಿಖೆ ನಡೆದಿದೆ.

Leave A Reply

Your email address will not be published.

error: Content is protected !!