ಶಿಥಿಲವಾದ ಶಾಲಾ ಕಟ್ಟಡಗಳ ತೆರವಿಗೆ ಸೂಚನೆ ; ಆರ್.ಎಸ್.ಉಮಾಶಂಕರ್

0 39


ಶಿವಮೊಗ್ಗ : ಮಳೆಗಾಲದ ದಿನಗಳಾಗಿರುವುದರಿಂದ ವಿದ್ಯಾರ್ಥಿಗಳ ನಿತ್ಯದ ತರಗತಿಗಳಿಗೆ ಯಾವುದೇ ಅಡಚಣೆಯಾಗದಂತೆ ಹಾಗೂ ಅವಘಡಗಳು ಸಂಭವಿಸದಂತೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತ್ವರಿತವಾಗಿ ನಾಶಪಡಿಸಲು ತುರ್ತು ಕ್ರಮವಹಿಸುವಂತೆ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ಎಸ್.ಉಮಾಶಂಕರ್ ಅವರು ಹೇಳಿದರು.


ಅವರು ಇಂದು ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಯಾವುದೇ ಒಂದು ಮಗುವು ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಸೂಚಿಸಿದ ಅವರು, ಪ್ರತಿ ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಹಾಗೂ ಶಾಲಾ ಸಮವಸ್ತ್ರ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು ಮಧ್ಯಾಹ್ನದ ಬಿಸಿಯೂಟಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ಮತ್ತು ಬೇಳೆಯನ್ನು ಬಳಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.


ಆರೋಗ್ಯ ಇಲಾಖೆಯಲ್ಲಿ ಬಹುದಿನಗಳಿಂದ ಬಳಸದೆ ಇರುವ ಯಂತ್ರಗಳನ್ನು ದುರಸ್ತಿಗೊಳಿಸಿ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು. ಹೊಸದಾದ ಯಂತ್ರಗಳನ್ನು ಖರೀದಿಸುವುದಕ್ಕಿಂತ ದುರಸ್ತಿಗೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಿದ ಅವರು ಅಗತ್ಯವಿದ್ದಲ್ಲಿ ಮಾತ್ರ ನೂತನ ಯಂತ್ರಗಳ ಖರೀದಿಸುವಂತೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲೆಯಲ್ಲಿ ಶೇ. 91ರಷ್ಟು ಮೆಕ್ಕೆಜೋಳ, ಶೇ.13ರಷ್ಟು ಭತ್ತ ಬೆಳೆ ಬಿತ್ತನೆಗೊಂಡಿದೆ. ಉಳಿದಂತೆ ಭತ್ತದ ಬಿತ್ತನೆಗೆ ಇನ್ನೂ ಕಾಲಾವಕಾಶ ಇರುವ ಬಗ್ಗೆ ಕೃಷಿ ಜಂಟಿ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರಿಂದ ಮಾಹಿತಿ ಪಡೆದ ಅವರು, ಕೃಷಿಯಂತ್ರಧಾರೆ ಯೋಜನೆಯಡಿ ಅಗತ್ಯವಿರುವ ರೈತರಿಗೆ ಕೃಷಿಯಂತ್ರಗಳು ಸಕಾಲದಲ್ಲಿ ದೊರೆಯದಿರುವ ಬಗ್ಗೆ ದೂರುಗಳಿದ್ದು, ಈಗಾಗಲೇ ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ಮುಖ್ಯಸ್ಥರೊಂದಿಗೆ ತಕ್ಷಣ ಸಮಾಲೋಚನೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.


ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಮೆಸ್ಕಾಂ ಸೂಪರಿಂಟೆಂಡೆಂಟ್ ಶಶಿಧರ್ ಅವರು ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ ಶೇ.70ರಷ್ಟು ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 75ಕೋಟಿ ರೂ.ಗಳ ವಿದ್ಯುತ್ ಬಿಲ್ ಹಾಗೂ ವಿಮಾನ ನಿಲ್ದಾಣದ 65ಲಕ್ಷ ಬಿಲ್ ಬಾಕಿ ಇದ್ದು, ಅದನ್ನು ಕೂಡಲೇ ಬಿಡುಗಡೆಗೊಳಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಅವರು ಮನವಿ ಮಾಡಿದರು.


ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಮಾತನಾಡಿ, ಶಕ್ತಿ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‍ಗಳ ಕೊರತೆ ಇದೆ. ಆದ್ದರಿಂದ ಗ್ರಾಮೀಣ ಜನರಿಂದ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮನವಿಗಳು ಬರುತ್ತಿವೆ. ಆದ್ದರಿಂದ ಜನರ ಅಗತ್ಯಗಳಿಗೆ ಸಂಚರಿಸಲು ಸುಮಾರು 70-100 ಬಸ್‍ಗಳ ಸೇವೆಯನ್ನು ಆರಂಭಿಸಲು ಅನುಮತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!