ಶಿವಮೊಗ್ಗ: ಫೇಸ್ಬುಕ್ನಲ್ಲಿ ಕಾಣಿಸಿಕೊಂಡ ‘ನಿವೃತ್ತ ನೌಕರರ ಕಾರ್ಡ್’ ಜಾಹೀರಾತನ್ನು ನಂಬಿ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡ ನಿವೃತ್ತ ನೌಕರರೊಬ್ಬರು ₹2.29 ಲಕ್ಷ ಆನ್ಲೈನ್ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಿವೃತ್ತ ನೌಕರರು ಫೇಸ್ಬುಕ್ ಬಳಸುತ್ತಿದ್ದ ವೇಳೆ ಹಿರಿಯ ನಾಗರಿಕರಿಗಾಗಿ ‘ನಿವೃತ್ತ ನೌಕರರ ಕಾರ್ಡ್’ ಎಂಬ ಜಾಹೀರಾತು ಹಾಗೂ ಲಿಂಕ್ ಕಾಣಿಸಿಕೊಂಡಿದೆ. ಪಿಂಚಣಿಗೆ ಸಂಬಂಧಿಸಿದ ಮಾಹಿತಿ ಪಡೆಯುವ ಉದ್ದೇಶದಿಂದ ಅವರು ಆ ಲಿಂಕ್ನಲ್ಲಿ ತಮ್ಮ ಕೆಲವು ವಿವರಗಳನ್ನು ನಮೂದಿಸಿದ್ದರು.
ಮರುದಿನ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಕೆನರಾ ಬ್ಯಾಂಕ್ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಲೈಫ್ ಸರ್ಟಿಫಿಕೇಟ್ ಅಪ್ಡೇಟ್ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ ಎನ್ನಲಾಗಿದೆ.
ಅದನ್ನು ನಿಜವೆಂದು ನಂಬಿದ ನಿವೃತ್ತ ನೌಕರರು ತಮ್ಮ ಕಸ್ಟಮರ್ ಐಡಿ, ಹೆಸರು, ಜನ್ಮ ದಿನಾಂಕ, ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ಸೇರಿದಂತೆ ಬ್ಯಾಂಕ್ಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎರಡು ಖಾತೆಗಳಿಂದ ₹2.29 ಲಕ್ಷ ವರ್ಗಾವಣೆ
ಮಾಹಿತಿ ಪಡೆದ ಬಳಿಕ ವಂಚಕರು ನಿವೃತ್ತ ನೌಕರರ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೊದಲ ಖಾತೆಯಿಂದ ₹2 ಲಕ್ಷ ಮತ್ತು ₹10 ಸಾವಿರ, ಎರಡನೇ ಖಾತೆಯಿಂದ ₹10 ಸಾವಿರ ಮತ್ತು ₹9 ಸಾವಿರ ಸೇರಿ ಒಟ್ಟು ₹2.29 ಲಕ್ಷ ಹಣ ಕಡಿತಗೊಂಡಿದೆ.
ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿರುವ ಸಂದೇಶಗಳನ್ನು ಗಮನಿಸಿದ ಬಳಿಕ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದ್ದು, ನಿವೃತ್ತ ನೌಕರರು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

