ಶಿವಮೊಗ್ಗ: ತುಮಕೂರು ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗ ಮಾರ್ಗದ ಎರಡು ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (20689) ರೈಲು ಯಶವಂತಪುರ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 75 ನಿಮಿಷ ತಡವಾಗಿ ಹೊರಡಲಿದೆ.
ಈ ಬದಲಾವಣೆ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಜಾರಿಯಲ್ಲಿರಲಿದೆ.
ತಾಳಗುಪ್ಪ–ಬೆಂಗಳೂರು ರೈಲಿಗೂ 40 ನಿಮಿಷ ವಿಳಂಬ
ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652) ರೈಲನ್ನು ಮಾರ್ಗಮಧ್ಯೆ ಸುಮಾರು 40 ನಿಮಿಷ ನಿಯಂತ್ರಿಸಲಾಗುತ್ತದೆ. ಇದರಿಂದ ಶಿವಮೊಗ್ಗ ಸೇರಿದಂತೆ ಈ ಮಾರ್ಗದ ಪ್ರಯಾಣಿಕರಿಗೆ ವಿಳಂಬವಾಗುವ ಸಾಧ್ಯತೆ ಇದೆ.
ತುಮಕೂರು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುತ್ತಿರುವ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಶಿವಮೊಗ್ಗ ಮತ್ತು ತಾಳಗುಪ್ಪ ಮಾರ್ಗದಲ್ಲಿ ಪ್ರಯಾಣಿಸುವವರು ಹೊರಡುವ ಮೊದಲು ರೈಲಿನ ನಿಗದಿತ ಸಮಯ ಹಾಗೂ ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.

