ಶಿವಮೊಗ್ಗ: ನಗರದಲ್ಲಿ ಹಾಡಹಗಲೇ ನಡೆದ ಭಾರಿ ಮನೆ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿದ್ಯಾನಗರ 4ನೇ ‘ಎ’ ಕ್ರಾಸ್‌ನಲ್ಲಿರುವ ಪಿಡಿಒ ನಟರಾಜ್ ದಂಪತಿಯ ಬಾಡಿಗೆ ಮನೆಯಲ್ಲಿ ಕಳ್ಳರು ಬೀಗ ಮುರಿದು ನುಗ್ಗಿ, ₹1.42 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಚ್‌ಗಳು ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಮಾಹಿತಿಯ ಪ್ರಕಾರ, ಪಿಡಿಒ ದಂಪತಿ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಸಮಯವನ್ನು ಕಳ್ಳರು ಗಮನಿಸಿಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಹಗಲು ವೇಳೆಯಲ್ಲೇ ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ.
ಕೇವಲ ಅರ್ಧ ಗಂಟೆಯೊಳಗೆ ಕಳ್ಳರು ಅಲ್ಮೆರಾ ಸೇರಿದಂತೆ ಮನೆಯ ಒಳಭಾಗವನ್ನು ಪರಿಶೀಲಿಸಿ, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಒಟ್ಟು ₹1,42,29,900 ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಕಳುವಾದ ವಸ್ತುಗಳಲ್ಲಿ ಸುಮಾರು 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣ ಹಾಗೂ ವಸ್ತುಗಳು, ₹1.5 ಲಕ್ಷ ಮೌಲ್ಯದ 15 ಬೆಲೆಬಾಳುವ ವಾಚ್‌ಗಳು ಮತ್ತು ₹86,000 ನಗದು ಸೇರಿವೆ ಎಂದು ಹೇಳಲಾಗಿದೆ.
ಮಧ್ಯಾಹ್ನ ದಂಪತಿಯ ಮಗಳು ಮನೆಗೆ ಬಂದಾಗ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ಒಳಗೆ ಹೋಗಿ ನೋಡಿದಾಗ ಅಲ್ಮೆರಾದಲ್ಲಿದ್ದ ಚಿನ್ನ, ಬೆಳ್ಳಿ, ಹಣ ಮತ್ತು ಇತರೆ ವಸ್ತುಗಳು ಕಳುವಾಗಿರುವುದು ತಿಳಿದುಬಂದಿದೆ. ತಕ್ಷಣವೇ ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಕಳ್ಳತನದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ. ಆ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

