ಹೊಂಬುಜ ; “ಜೈನ ಧರ್ಮವು ಜೈನ ಸಾಹಿತ್ಯದ ಕೊಡುಗೆಯ ಮೂಲಕ ಅಮೂಲ್ಯ ವೃತ್ತಾಂತಗಳನ್ನು ಜಗತ್ತಿಗೆ ನೀಡಿದೆ. ಆದಿಕವಿ ಪಂಪನ ಕೃತಿಗಳು ಪ್ರಸಕ್ತ ವಿದ್ಯಮಾನದಲ್ಲಿಯೂ ಪ್ರಸ್ತುತವೆನಿಸಿದೆ. ಸ್ಯಾದ್ಯಾಯದಿಂದ ಜೀವಜಗತ್ತಿನ ಪ್ರಕೃತಿಯ ರಕ್ಷಣೆಯೊಂದಿಗೆ ಮಾನವ ಕಲ್ಯಾಣ ಸಂದೇಶವನ್ನು ಅರಿಯಬಹುದು” ಎಂದು ಸಂಶೋಧಕ, ವಿಶ್ರಾಂತ ಕುಲಸಚಿವರಾಗಿರುವ ಪ್ರೊ. ಶಾಂತಿನಾಥ ದಿಬ್ಬದರವರು ಪಂಪ ರಚಿತ ಆದಿಪುರಾಣದ ವಿವಿಧ ಸನ್ನಿವೇಶಗಳನ್ನು ಅವಲೋಕಿಸಿ, ಮಾತನಾಡಿದರು. ಹೊಂಬುಜ ಶ್ರೀ ಕ್ಷೇತ್ರದ ವತಿಯಿಂದ ನೀಡುವ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರಿಂದ ಸ್ವೀಕರಿಸಿ ಮಾತನಾಡಿದರು. “ಸಾಹಿತ್ಯ ಪ್ರಭೆ ಬೆಳಗಿಸಲು ಹೊಂಬುಜ ಶ್ರೀಕ್ಷೇತ್ರವು ಸಾಹಿತ್ಯಾರಾಧನೆಯ ಮಹತ್ವವನ್ನು ಸಾರುತ್ತಿರುವುದು” ಅಭಿನಂದನಾರ್ಹವಾದುದೆಂದರು.

ಪರಮಪೂಜ್ಯ ಸ್ವಸ್ತಿಶ್ರೀಗಳವರು ಪ್ರವಚನ ದಯಪಾಲಿಸುತ್ತಾ ಯುವ ಪೀಳಿಗೆಯ ವಿದ್ಯಾವಂತರ ಹಳೆಗನ್ನಡ ಸಾಹಿತ್ಯಾಭಿರುಚಿ ರೂಢಿಸಿಕೊಂಡು ಜೀವನದಲ್ಲಿ ಆದರ್ಶರಾಗುವಂತೆ ಆಶಿಸಿದರು. ಪ್ರೊ. ಶಾಂತಿನಾಥ ದಿಬ್ಬದರವರು ಜೈನ ಸಾಹಿತ್ಯದ ಐಹಿತ್ಯ, ಸಾರವನ್ನು ಸರಳವಾಗಿ ಪ್ರಚುರಪಡಿಸಿರುವುದು. ಅನೇಕ ಅವಲೋಕಿನ-ಸಂಶೋಧನ ಕೃತಿಗಳನ್ನು ಪ್ರಕಟಿಸಿರುವುದು ಸಾಹಿತ್ಯಾಭಿಮಾನಿಗಳಿಗೆ ಪ್ರೇರಣೆ ನೀಡುವುದಾಗಿದೆಯೆಂದು ತಿಳಿಸಿದರು. ಪ್ರೊ. ಶಾಂತಿನಾಥ ದಿಬ್ಬದವರು ಧರ್ಮಪತ್ನಿ ರತ್ನ ಶಾಂತಿನಾಥ ದಿಬ್ಬದರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಪ್ರೊ. ದಿಬ್ಬದರವರನ್ನು ಅಭಿನಂದಿಸಿ ರಾಷ್ಟ್ರೀಯ ಭಾವೈಕ್ಯತೆ, ಶಾಂತಿ ನೆಮ್ಮದಿಯ ಅಹಿಂಸಾಧರ್ಮ ಪರಿಪಾಲನೆಯು ಜೈನ ಧರ್ಮದ ಮರ್ಮವನ್ನು ವಿವರಿಸಿದರು.
ಶ್ರೀಕ್ಷೇತ್ರದ ಭಕ್ತರಾಗಿ, ದಾನಗಳಾಗಿರುವ ವಿಜಯ ಪಾಟ್ನಿಯವರು ಅತಿಶಯ ಕ್ಷೇತ್ರದ ಅತಿಶಯವು ಸರ್ವರಿಗೂ ಪ್ರೇರಕಶಕ್ತಿಯಾಗಿರಲೆಂದು ಶುಭ ಹಾರೈಸಿದರು.

ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಯಶೋಧರ ಇಂದ್ರರು ಪ್ರಶಸ್ತಿ ಪತ್ರ ವಾಚನ ಮಾಡಿದರು. ಹೆಚ್.ಬಿ. ಸಂತೋಷಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ರಥೋತ್ಸವ ದಾನಿವರ್ಗದವರನ್ನು ಪೂಜ್ಯ ಶ್ರೀಗಳವರು ಅಭಿನಂದಿಸಿ, ಆಶೀರ್ವದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





