ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ದ ರಾಮಚಂದ್ರಪುರ ಮಠಕ್ಕೆ ರಾಮೋತ್ಸವ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸಂಸದ ಬಿ.ವೈ. ರಾಘವೇಂದ್ರ ದಂಪತಿಗಳು ಸೋಮವಾರ ಬೆಳಗ್ಗೆ ಭೇಟಿ ನೀಡಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಗೋಪೂಜೆ, ಸ್ವರ್ಣ ಪಾದೂಕ ಪೂಜೆ, ವಿದ್ಯಾರ್ಥಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪೂರ್ವಕ ಮಂತ್ರಾಕ್ಷತೆ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಕ್ಷೇತ್ರದ ಶ್ರೀ ಚಂದ್ರಮೌಳೀಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ರಾಜಕೀಯ ವಿರೋಧಿಗಳು ಬಿ.ಎಸ್.ವೈ ಕುಟುಂಬದ ವಿರುದ್ದ ವಿನಃ ಕಾರಣ ಮಾಡುತ್ತಿರುವ ಸುಳ್ಳು ಆರೋಪಗಳಿಂದ ಮುಕ್ತ ಹೊಂದಲು ತಮ್ಮ ಕುಟುಂಬ ವರ್ಗಕ್ಕೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಅಲ್ಲದೇ, ಕುಟುಂಬಕ್ಕೆ ಸಮಾಜಮುಖಿ ಸೇವೆ ಮಾಡುವಂತ ಅವಕಾಶ ದೇವರು ಕಲ್ಪಿಸಿದ್ದು, ಮುಂದೆಯೂ ಸೇವೆ ನಿರಂತರ ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಹೆಚ್ಚೆಚ್ಚು ಕಲ್ಪಿಸಲಿ ಎಂಬುದಾಗಿ ದೇವರಲ್ಲಿ ಸಂಕಲ್ಪಿಸಲಾಯಿತು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದ ಬಿವೈಆರ್, ಯಡಿಯೂರಪ್ಪ ಹಾಗೂ ಅವರು ಕುಟುಂಬ ಕುರಿತಂತೆ ರಾಜ್ಯದ ಜನತೆಗೆ ಸ್ಪಷ್ಟ ನಿಲುವಿದೆ. ಅವರ ಸಂಘಟನಾ ಶಕ್ತಿ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದೆ. ಯಾರೊಬ್ಬ ನಮ್ಮ ಕುಟುಂಬ ವಿರುದ್ದ ಮಾತನಾಡಿದ ಮಾತ್ರಕ್ಕೆ ನಾವೇನು ಎಂದು ಯಾರಿಗೂ ತೋರಿಕೆ ಪಡಿಸುವ ಅವಶ್ಯಕತೆ ಇಲ್ಲ. ನಮ್ಮ ರಾಜಕೀಯ ಸೇವೆ ಪರಿಗಣಿಸಿಯೇ ಕೇಂದ್ರದ ಬಿಜೆಪಿ ನಾಯಕರು ಕುಟುಂಬದ ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ. ಈ ಕಾರಣಕ್ಕೆ ಸರ್ಕಾರಿ ನೌಕರರ ಸರಣಿ ಆತ್ಮಹತ್ಯೆ ನಡೆದಿದೆ. ವಿಶೇಷವಾಗಿ ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ, ಭದ್ರಾವತಿ, ಸಾಗರಗಳಲ್ಲಿ ಅಕ್ರಮ ಮರಳು ಮಾಫಿಯ ನಿರಂತರವಾಗಿದೆ. ಬೆಲೆ ಏರಿಕೆಯೂ ರಾಜ್ಯದ ಜನತೆಗೆ ಬ್ರಹ್ಮ ನಿರಸನ ಉಂಟು ಮಾಡಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತದಾರ ಕೆಂಡ ಮಂಡಲವಾಗಿದ್ದು, ಯಾವಾಗ ಈ ಕೆಟ್ಟ ಸರ್ಕಾರ ತೊಲಗುವುದೋ ಎಂದು ಕಾಯ್ದು ಕುಳಿತ್ತಿದ್ದಾನೆ. ರಾಜ್ಯ ಸರ್ಕಾರಕ್ಕೆ ಈಗಲೂ ಉತ್ತಮ ಜನಪರ ಆಡಳಿತ ನೀಡುವ ವಿಫಲ ಅವಕಾಶಗಳಿವೆ. ಹಾಲಿ ಮತ್ತು ಭಾವಿ ಮುಖ್ಯಮಂತ್ರಿಗಳು ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ಜನರ ಹಿತದೃಷ್ಟಿಯಿಂದ ಚಿಂತನೆ ಮಾಡಲಿ ಎಂಬ ಆಶಯ ವ್ಯಕ್ತಪಡಿಸಿದರು.
ಸಿಗಂದೂರು ಸೇತುವೆ ಲೋಕಾರ್ಪಣೆ ಕುರಿತಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಚರ್ಚಿಸಿದ್ದು, ಸೇತುವೆ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದೆ. ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲಕ್ಕೆ ಮುನ್ನವೇ ಲೋಕಾರ್ಪಣೆಗೆ ಸಿದ್ದತೆ ನಡೆದಿದೆ. ಇದೇ ಮೇ ತಿಂಗಳ ಅಂತ್ಯಕ್ಕೆ ಉದ್ಘಾಟನೆಗೆ ಅನುವು ಮಾಡಿಕೊಂಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ ಅಂತ್ಯದವರೆಗೂ ಗುತ್ತಿಗೆದಾರರಿಗೆ ಕಾಮಗಾರಿ ಪೂರೈಕೆಗೆ ಕಾಲವಕಾಶವಿದೆ. ಆದರೂ, ಮಳೆಗಾಲ ಆರಂಭಕ್ಕೆ ಮುನ್ನವೇ ಸೇತುವೆ ಲೋರ್ಕಾಪಣೆಗೊಳ್ಳುವ ಭರವಸೆಯನ್ನು ಸಂಸದ ಬಿ.ವೈ.ರಾಘವೇಂದ್ರ ವ್ಯಕ್ತಪಡಿಸಿದರು.

ಹೊಸನಗರ ಪಟ್ಟಣದಲ್ಲಿ ಹಾದು ಹೋಗುವ ರಾಣೆಬೆನ್ನೂರು-ಬೈಂದೂರು ರಾಷ್ಟೀಯ ಹೆದ್ದಾರಿ-766ಸಿ, ಕುರಿತು ಮಾತನಾಡಿದ ಸಂಸದರು, ಹೆದ್ದಾರಿ ನಿರ್ಮಾಣ ಕಾಮಗಾರಿ ಈಗಾಗಲೇ ಶೇ.50 ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಸಹ ಭರದಿಂದ ಸಾಗಿದೆ. ಅಗತ್ಯ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಡೆದಿದೆ. ಶೇ.90 ಭೂಮಿ ವಶಕ್ಕೆ ಪಡೆದು, ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಿದ ನಂತರವೇ ಕಾಮಗಾರಿ ಆರಂಭಿಸುವಂತೆ ಸುಪ್ರಿಂಕೋರ್ಟ್ ಗೈಡ್‌ಲೈನ್ ಇರುವ ಕಾರಣ ಹೆದ್ದಾರಿ ನಿರ್ಮಾಣ ಕಾರ್ಯ ಕೊಂಚ ವಿಳಂಬ ಗತಿಯಲ್ಲಿ ಸಾಗಿದೆ. ಆದರೂ, ಸಂಬಂಧಪಟ್ಟ ಇಲಾಖೆಗಳಿಗೆ ಕಾಮಗಾರಿ ಶೀಘ್ರ ಪೂರೈಸಲು ಚುರುಕು ಮುಟ್ಟಿಸಲಾಗಿದೆ. ಅಲ್ಲದೇ, ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಆಗಿದ್ದು, ಕಾಮಗಾರಿ ಚಾಲ್ತಿಯಲ್ಲಿದ್ದು ಶೀಘ್ರ ಪೂರ್ಣಗೊಂಡು ರೈಲು ಓಡಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದು, ಇದೊಂದು ಸರ್ವಕಾಲಿಕ ದಾಖಲೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದರಿಗೆ ಮಲೆನಾಡು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ ದಂಪತಿಗಳು ಧಾರ್ಮಿಕ ಆಚರಣೆಯಲ್ಲಿ ಸಾಥ್ ನೀಡಿದ್ದು ವಿಶೇಷವಾಗಿ ಕಂಡುಬಂತು.
ಈ ವೇಳೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶ್ ಸ್ವಾಮಿರಾವ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಮಾಜಿ ಅಧ್ಯಕ್ಷ ಗಣಪತಿ ಬಿಳಗೋಡು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಎನ್. ಸುಧಾಕರ್, ಪ್ರಮುಖರಾದ ಎನ್.ಆರ್. ದೇವಾನಂದ್, ತೀರ್ಥೇಶ್, ಬಸವರಾಜ್ ಮಂಡಾನಿ ಮೋಹನ್, ಕೆ.ವಿ.ಕೃಷ್ಣಮೂರ್ತಿ, ಹಿರೇಮಣತಿ ಶಿವಾನಂದ್, ಗಣೇಶ್ ಸಂಪಳ್ಳಿ ಮೊದಲಾದವರು ಇದ್ದರು.