ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – ಶಿಕ್ಷಕರ ಅಸಮರ್ಪಕ ನಿಯೋಜನೆಗೆ ವ್ಯಾಪಕ ಖಂಡನೆ

Written by Mahesha Hindlemane

Published on:

ಹೊಸನಗರ ; ನಿನ್ನೆಯಿಂದ ರಾಜ್ಯಾದ್ಯಂತ ಆರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೊಸನಗರ ತಾಲ್ಲೂಕಿನಲ್ಲಿ ಹಲವು ಗೊಂದಲಗಳ ಗೂಡಾಗಿದ್ದು, ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಿನ್ನೆ ಸಂಜೆ ಶಿಕ್ಷಕರನ್ನು ನಿಯೋಜನೆ ಮಾಡಿದ ಮಾಹಿತಿ ಸರ್ವೇ ಆ್ಯಪ್ ನಲ್ಲಿ ದೊರಕಿದ್ದು, ದೂರದೂರಿನ ಶಿಕ್ಷಕರುಗಳಿಗೆ ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಅಲ್ಲದೆಯೇ ಹಲವು ಕಂದಾಯ ಗ್ರಾಮಗಳೇ ಪಟ್ಟಿಯಲ್ಲಿ ಮಾಯವಾಗಿವೆ.

ಒಬ್ಬ ಶಿಕ್ಷಕರಿಗೆ ಹಲವು ಕಂದಾಯ ಗ್ರಾಮಗಳ ಮ್ಯಾಪಿಂಗ್ !

ಸರ್ವೇ ಆ್ಯಪ್ ನಲ್ಲಿ ಕೆಲ ಶಿಕ್ಷಕರಿಗೆ ಬೇರೆ ಬೇರೆ ಗ್ರಾಮಗಳ ಮನೆಗಳನ್ನು ಮ್ಯಾಪಿಂಗ್ ಮಾಡಿದ್ದು,ಸುಮಾರು 20 ಕಿ.ಮೀ.ಗೂ ಅಧಿಕ ಸುತ್ತಳತೆ ಪ್ರದೇಶವನ್ನು ನೀಡಿದ್ದು 3-4 ಗ್ರಾಮಗಳಲ್ಲಿನ ಹಲವಾರು ಮನೆಗಳ UH ID ನೀಡಲಾಗಿದೆ. ಇದೂ ಸಹ ಹಲವು ಗೊಂದಲಗಳಿಗೆ ಕಾರಣವಾಗಿದೆ.

ಹಲವು ಗ್ರಾಮಗಳು ಸರ್ವೇಯಿಂದ ಮಾಯ !

ಇನ್ನು ತಾಲ್ಲೂಕಿನ ಗ್ರಾಮಗಳ ಪಟ್ಟಿಯು ಅವ್ಯವಸ್ಥೆಯ ಆಗರವಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಗ್ರಾಮಗಳನ್ನೇ ಕೈ ಬಿಡಲಾಗಿದೆ. ಉದಾಹರಣೆಗೆ ಸಂಪೆಕಟ್ಟೆ (ಹೊಸೂರು) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ಮನೆಗಳಿದ್ದು, ಕಟ್ಟಿನಹೊಳೆ ವ್ಯಾಪ್ತಿಗೆ ಮಾತ್ರ ಒಬ್ಬ ಗಣತಿದಾರ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಉಳಿದ ಗ್ರಾಮಗಳ ಹೆಸರೇ ಇಲ್ಲದಾಗಿದೆ. ಇನ್ನೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬಿಸಿಎಂ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. 254 ಶಿಕ್ಷಕರಿಗೆ ತರಬೇತಿ ನೀಡಿದ ಇಲಾಖೆಯು ಈಗ 205 ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಂಡಿದೆ. ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಸಾಕಷ್ಟು ಶಿಕ್ಷಕರಿದ್ದರೂ ಕೂಡ ಅವರನ್ನು ನಿಯೋಜನೆ ಮಾಡದೆ 60 ಕಿ.ಮೀ ದೂರದೂರಿನ ಕಡಿಮೆ ಶಿಕ್ಷಕರನ್ನು ಹೊಂದಿರುವ ಕ್ಲಸ್ಟರ್ ಗಳ ಶಿಕ್ಷಕರನ್ನು ನಿಯೋಜಿಸಿದ್ದು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಶಿಕ್ಷಕರ ಪರದಾಟ ;

ಇನ್ನು ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಬಿಸಿಎಂ ಇಲಾಖೆಯ ಅಧಿಕಾರಿಗಳ ಬಳಿ ಕೇಳಿ ಎನ್ನುವುದು, ಅವರ ಬಳಿ ಹೋದರೆ ತಹಸೀಲ್ದಾರ್ ಹತ್ತಿರ ಕೇಳಿ ಎಂದು ನುಣುಚಿಗೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಇಡೀ ದಿನ ಶಿಕ್ಷಕರು ಮೂರೂ ಕಚೇರಿಗಳಿಗೂ ಅಲೆದಾಡುವ ದೃಶ್ಯ ಕಂಡುಬಂತು.

ಇನ್ನೂ ಈ ರೀತಿಯ ಪಟ್ಟಿ ಯಾರು ತಯಾರಿಸಿದ್ದು ಎಂದು ಕೇಳಿದರೆ ಸಮೀಕ್ಷೆಯ ನೋಡಲ್ ಅಧಿಕಾರಿಗಳು ಕೂಡ ಮೌನ ವಹಿಸುತ್ತಿದ್ದಾರೆ. ಅಲ್ಲದೇ ಸರ್ವೇ ಅಪ್ಲಿಕೇಶನ್ ಕೂಡ ಕಾರ್ಯ ನಿರ್ವಹಿಸದೇ ಗಣತಿಗೆ ತೆರಳಿದ ಶಿಕ್ಷಕರು ಹೈರಾಣಾದರು.

ಮನೆಯ ಯಜಮಾನರ ಹೆಸರುಳ್ಳ ಪಟ್ಟಿ ನೀಡಲು ಒತ್ತಾಯ ;

ಗಣತಿದಾರರಿಗೆ ಯುಹೆಚ್ ಐಡಿ ಮಾತ್ರ ನೀಡಿದ್ದು, ಗೂಗಲ್ ಮ್ಯಾಪ್ ಲೊಕೇಶನ್ ಆಧರಿಸಿ ಸರ್ವೇ ಮಾಡುವುದು ತೀರಾ ಕಷ್ಟಕರವಾಗಿದೆ. ಮನೆಯ ಯಜಮಾನರ ಹೆಸರುಳ್ಳ ಪಟ್ಟಿಯನ್ನು ಗಣತಿದಾರರಿಗೆ ನೀಡಬೇಕು ಎಂದು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಿವಮೂರ್ತಿ ಎಂ.ಎಸ್.
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮೇಘರಾಜ್ ಹೆಚ್.ಎಂ. ಶಿಕ್ಷಕರಾದ ಸುನೀಲ್ ಕುಮಾರ್ ಹೆಬ್ಬಿಗೆ, ಶ್ರವಣಕುಮಾರ್ ಕುಂಬ್ಳೆ, ನಾಗರಾಜ್ ಮುಂಬಾರು, ಅಂಬಿಕಾ ಹೆಚ್. ಮಳವಳ್ಳಿ, ಆಶಾ ಹೆಬ್ಬೈಲು ಮತ್ತಿತರರು ಉಪಸ್ಥಿತರಿದ್ದರು.

Leave a Comment