ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರಾವಣ ಸಂಪತ್ 3ನೇ ಶುಕ್ರವಾರದಂದು ಊರ ಪರವೂರ ಭಕ್ತವೃಂದದವರು ಶ್ರದ್ಧಾಪೂರ್ವಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನಿಧ್ಯ, ನೇತೃತ್ವ ಹಾಗೂ ಉಪಸ್ಥಿತಿಯಲ್ಲಿ ಜಿನಾಗಮೋಕ್ತ ವಿಧಿ-ವಿಧಾನಗಳು ಜರುಗಿದವು.
“ಪ್ರತಿಯೋರ್ವರು ಜೀವನದಲ್ಲಿ ಸಕಾರಾತ್ಮಕ ಆಶಾಭಾವದೊಂದಿಗೆ ಸದ್ಧರ್ಮ ವ್ರತಾಚರಣೆ ಪರಿಪಾಲಿಸುವ ಮೂಲಕ ವೈಯುಕ್ತಿಕ ಶ್ರೇಯಸ್ಸು ಲಭಿಸುವುದು ಶತಸಿದ್ಧ” ಎಂದು ಸ್ವಸ್ತಿಶ್ರೀಗಳವರು ಪವಚನದಲ್ಲಿ ತಿಳಿಸಿದರು. “ಧರ್ಮವನ್ನರಿತು ಬಾಳುವ ಪಥವು ಸಂಕಷ್ಟ ಮುಕ್ತ ಎನ್ನುತ್ತಾ ಭಕ್ತಿಯ ಫಲಶ್ರತಿ ಕುಟುಂಬದವರಿಗೂ, ಸಮಾಜ-ರಾಷ್ಟಕ್ಕೂ ದೊರಕಲಿದ್ದು, ಆಧ್ಯಾತ್ಮಿಕ ಜೀವನವು ಶ್ರೇಷ್ಠವಾದುದು” ಎಂದು ಭಕ್ತಸಮುದಾಯದವರನ್ನು ಆಶೀರ್ವದಿಸಿ ಹರಸಿದರು.

ಪ್ರಾತಃ ಕಾಲದಲ್ಲಿ ಶ್ರೀ ನೇಮಿನಾಥ ಸ್ವಾಮಿ, ಶ್ರೀಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಗಳಲ್ಲಿ ಅಷ್ಟವಿಧಾರ್ಚನೆ ಪೂಜೆ ನೆರವೇರಿತು.
108 ವಿವಿಧ ಶರ್ಕರ ನೈವೇದ್ಯಗಳನ್ನು ಫಲ-ಪುಷ್ಪದೊಂದಿಗೆ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅರ್ಪಿಸಿ ಪರಂಪರಾನುಗತ ಪೂಜಾ ವಿಧಾನವು ಭಕ್ತರಿಗೆ ಧನ್ಯತೆಯ ಭಾವ ಸ್ಪರಿಸಿತು. ವಸತಿ, ಉಪಹಾರ ಮತ್ತು ಅನ್ನಪ್ರಸಾದ ಸೇವೆಯನ್ನು ಶ್ರೀಮಠದ ವತಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.