RIPPONPETE ; ಜೈನ ಧರ್ಮ ಶಾಸ್ತ್ರದನ್ವಯ ನವರಾತ್ರಿಯ ಎಂಟನೇಯ ದಿನವನ್ನು ‘ಜೀವದಯಾಷ್ಟಮಿ’ ಎಂದು ಆಚರಿಸುವುದರಿಂದ ರಾಗಾದಿ ದ್ವೇಷ ತ್ಯಜಿಸುವಂತೆ ಪರಸ್ಪರ ವಾತ್ಸಲ್ಯಮಯಿ ಜೀವಕಾರುಣ್ಯಭಾವ ರೂಢಿಸಿಕೊಳ್ಳಲೆಂಬ ಸಂದೇಶವಿದೆ ಎಂದು ಜೈನಮಠದ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ತಿಳಿಸಿದರು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ನಡೆದ ಆಶ್ವಯುಜ ಶುಕ್ಲ ಅಷ್ಟಮಿಯ ನವರಾತ್ರಿ ಸುದಿನದಲ್ಲಿ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಜೈನ ಮಠದಲ್ಲಿ ನವರಾತ್ರಿಯ ಎಂಟನೇಯ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ, ಆಶೀರ್ವಚನ ನೀಡಿ “ಜಗತ್ತಿನ ಎಲ್ಲ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳಲ್ಲಿಯೂ ಜೀವವಿರುವುದರಿಂದ ವಿನಾಕಾರಣ ಫಾಸಿಗೊಳಿಸಬಾರದು ಮತ್ತು ಸರ್ವ ಜೀವರಾಶಿಗಳ ಬಗ್ಗೆ ಮಮಕಾರವಿದ್ದಿರಬೇಕು. ಅಹಿಂಸಾಭಾವದ ಜೀವ ಜಗತ್ತು ಸುಖ-ಶಾಂತಿಯ ಪರಿಸರದಲ್ಲಿ ಅನ್ಯೋನ್ಯತೆಯಿಂದ ದುಃಖ ಕಷ್ಟ ನಷ್ಟಗಳಿಂದ ದೂರವಿರಬೇಕು ಎಂದು ಬೋಧಿಸಿ, ಆಶೀರ್ವದಿಸಿದರು.
1008 ಪಾರ್ಶ್ವನಾಥ ಸ್ವಾಮಿ ವಿಶ್ವವಂದ್ಯ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ ಪೂರ್ವಪರಂಪರೆಯಂತೆ ಶೋಡೋಪಚಾರ ಪೂಜಾ ವಿಧಿ-ವಿಧಾನಗಳು ಭಕ್ತವೃಂದದವರ ಪಾಲ್ಗೊಳ್ಳುವಿಕೆಯಿಂದ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಪ್ರಾತಃಕಾಲ ಕುಮದ್ವತಿ ತೀರ್ಥದಿಂದ ಅಗ್ರೋದಕ ತಂದು, ಜಿನಾಲಯಗಳಲ್ಲಿ ಪೂಜಾ ವಿಧಾನಗಳು ನಡೆದವು. ಆರ್ಯಿಕಾ ರತ್ನ ಶ್ರೀ 105 ಶಿವಮತಿ ಮಾತಾಜಿಯವರ ಉಪಸ್ಥಿತಿಯಲ್ಲಿ ಜಿನನಾಮಸ್ಮರಣೆ, ಶ್ರೀ ಪದ್ಮಾವತಿ ದೇವಿ ಸ್ತ್ರೋತ್ರಗಳನ್ನು ಪಠಿಸಿದರು.
ಶ್ರೀ ಮಹಾವೀರ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ, ಶ್ರೀ ನಾಗದೇವರು, ತ್ರಿಕೂಟ ಜಿನಾಲಯ, ಬೋಗಾರ ಬಸದಿ, ಮಕ್ಕಳ ಬಸದಿ, ಪಂಚಕೂಟ ಬಸದಿ, ನಗರ ಜಿನಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ವಿವಿಧ ಊರುಗಳಿಂದ ಆಗಮಿಸಿದ ಭಕ್ತರು, ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಸದಸ್ಯೆಯರು, ಪೂಜಾ ಸೇವೆ ಸಮರ್ಪಿಸಿದರು.
ರಾತ್ರಿ ಅಷ್ಟಾವದಾನ, ಸಂಗೀತ, ನೃತ್ಯ, ವಾದ್ಯಗೋಷ್ಠಿ, ಮಹಾಮಂಗಳಾರತಿಯ ಪ್ರಸಾದ ವಿತರಣೆ ಕಾರ್ಯಕ್ರಮ ಸಾಂಗವಾಗಿ ನೆರವೇರಿದವು.