RIPPONPETE ; ಆಶ್ವಯುಜ ಶುಕ್ಲಪಕ್ಷದ ಬಿದಿಗೆ ಶುಭ ದಿನವು ಶರನ್ನವರಾತ್ರಿಯ ದ್ವಿತೀಯ ದಿನದ ಧಾರ್ಮಿಕ ವಿಧಿಗಳು ಆಗಮೋಕ್ತ ಶಾಸ್ತ್ರದನ್ವಯ ಹೊಂಬುಜ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಲೋಕವಂದ್ಯ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನೆರವೇರಿಸಲಾಯಿತು. ಊರ ಪರವೂರ ಶ್ರಾವಕ-ಶ್ರಾವಕಿಯರು ಸಹಸ್ರನಾಮ ಕುಂಕುಮಾರ್ಚನೆಯಲ್ಲಿ ತನ್ಮಯತೆಯಿಂದ ಪಾಲ್ಗೊಂಡರು.
ಭಕ್ತರ ಅಚಲ ಭಕ್ತಿಯಿಂದ ಸಹಸ್ರನಾಮ ಕುಂಕುಮಾರ್ಚನೆ ಮಾಡಿರುವುದರಿಂದ ಸಾಮರಸ್ಯದ ಜೀವನ ನಿರ್ವಹಣೆಗೆ ಪೂರಕವಾಗಿರುತ್ತದೆ ಎಂದು ಸ್ವಸ್ತಿಶ್ರೀಗಳವರು ಆಶೀರ್ವಚನ ನೀಡಿ, ಭಕ್ತರನ್ನು ಶ್ರೀ ಮಂತ್ರಾಕ್ಷತೆಯಿಂದ ಹರಸಿದರು. ಪುಷ್ಪ-ಫಲಗಳಿಂದ ಶ್ರೀ ಪದ್ಮಾವತಿ ದೇವಿ, ಸುವರ್ಣ-ರಜತ ಆಭರಣಗಳಿಂದ ಶೋಭಾಯಮಾನವಾಗಿ ಅಲಂಕರಿಸಿರುವುದು ವಿಶೇಷವಾಗಿತ್ತು.
ಬೆಳಿಗ್ಗೆ ಕುಮಧ್ವತಿ ತೀರ್ಥದಿಂದ ಅಗ್ರೋದಕವನ್ನು ಸಾಲಾಂಕೃತ ಮೆರವಣಿಗೆಯಲ್ಲಿ ಜಿನಮಂದಿರಕ್ಕೆ ತರಲಾಯಿತು. ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ಜಿನಾಗಮ ಪದ್ಧತಿಯಿಂದ ಪೂಜೆ ನೆರವೇರಿತು.
ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಸನ್ನಿಧಿಯಲ್ಲಿ ಪೂಜೆ ಬಳಿಕ ಶ್ರೀ ಪದ್ಮಾವತಿ ದೇವಿ ಜಿನಮಂದಿರದಲ್ಲಿ ಸ್ವಸ್ತಿಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕುಂಕುಮಾರ್ಚನೆಯು ವಿಧಿವತ್ತಾಗಿ ಜರುಗಿತು. ಅರ್ಯಿಕ ರತ್ನ ಶ್ರೀ 105 ಶಿವಮತಿ ಮಾತಾಜಿ ಪೂಜಾ ವಿಧಿಗಳಲ್ಲಿ ಉಪಸ್ಥಿತರಿದ್ದು ಪೂಜಾ ವಿಧಾನದಲ್ಲಿ ಸ್ತ್ರೋತ್ರಗಳನ್ನು ಪಠಿಸಿದರು.
ವಾದ್ಯಗೋಷ್ಠಿಯೊಂದಿಗೆ ಪೂಜಾ ವಿಧಿ ಪೂರ್ವ ಪರಂಪರೆಯಂತೆ ನಡೆಯಿತು. ರಾತ್ರಿ ಅಷ್ಟಾವಧಾನದೊಂದಿಗೆ ಉತ್ಸವ, ಜಿನಭಜನೆ, ಜಿನನಾಮ ಗಾಯನ, ಸಂಗೀತ, ಕಾರ್ಯಕ್ರಮಗಳಲ್ಲಿ ಭಕ್ತವೃಂದದವರು ಧನ್ಯತಾಭಾವದಿಂದ ಪಾಲ್ಗೊಂಡರು. ದೀಪಾಲಂಕಾರ ಆಕರ್ಷಕವಾಗಿತ್ತು.
ಅ.09 ಸರಸ್ವತಿ ಪೂಜೆ, ಅ.10 ಜೀವದಯಾಷ್ಟಮಿ, ಅ. 11 ಆಯುಧಪೂಜೆ, ಅ.12 ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಪೂಜಾ ವಿಧಿಗಳಲ್ಲಿ ಪಾಲ್ಗೊಳ್ಳಬೇಕೆಂದು ಅಪೇಕ್ಷಿಸಲಾಗಿದೆ.