RIPPONPETE ; ಅಭೀಷ್ಠವರಪ್ರದಾಯಿನಿ ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪ್ರಕೃತಿಯಲ್ಲಿ ಬೆಳೆಯುವ ವಿಭಿನ್ನ ಫಲಗಳನ್ನರ್ಪಿಸಿ, ಪೂಜಾ ವಿಧಿ-ವಿಧಾನಗಳನ್ನು ಶರನ್ನವರಾತ್ರಿ ಉತ್ಸವದ ಚತುರ್ಥ ದಿನದಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾಗಿರುವ ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನೆರವೇರಿತು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ಪೂಜಾ ವಿಧಿಯ ಸ್ತ್ರೋತ್ರಗಳನ್ನು ಪಠಿಸಿದರು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಚತುರ್ಥ ದಿನದಂದು ಶ್ರೀಗಳು ಆಶೀರ್ವಚನ ನೀಡಿ ನಿಸರ್ಗದಲ್ಲಿ ಆಹಾರಕ್ಕಾಗಿ ಮತ್ತು ಔಷಧಿ ರೂಪದಲ್ಲಿ ಬಳಸುವ ನಾನಾ ವಿಧಗಳ ಫಲಗಳು ಉತ್ಕಷ್ಟವೂ, ಸ್ವಾದಿಷ್ಟವೂ ಆಗಿರುತ್ತದೆ ಎಂದು ಸ್ವಸ್ತಿಶ್ರೀಗಳವರು ತಮ್ಮ ಪ್ರವಚನದಲ್ಲಿ ವಿವರಿಸುತ್ತಾ “ಶ್ರೀ ಪದ್ಮಾವತಿ ದೇವಿಯ ಆರಾಧನೆಯಲ್ಲಿ ವಿವಿಧ ಫಲಗಳನ್ನರ್ಪಿಸುವ ನವರಾತ್ರಿಯ ಪೂಜಾ ವಿಧಿಗಳಲ್ಲಿ ವೈಶಿಷ್ಟಪೂರ್ಣ ಮಹತ್ವವಿದೆ. ಜೀವನದಲ್ಲಿ ಕಾಯಕವನ್ನು ಮಾಡುವವರಿಗೆ ಸತ್ಫಲ ಕರುಣಿಸಲಿ” ಎಂದು ಭಕ್ತರನ್ನು ಹರಸಿ, ಆಶೀರ್ವದಿಸಿದರು.

ವಾದ್ಯ ಗೊಷ್ಠಿಯೊಂದಿಗೆ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಜಿನಾಲಯಕ್ಕೆ ತಂದರು. ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ತ್ರಿಕೂಟ ಜಿನಾಲಯದ ಶ್ರೀ ಶಾಂತಿನಾಥ ಸ್ವಾಮಿ, ಶ್ರೀ ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ಶ್ರೀಫಲ-ಪುಷ್ಪಗಳಿಂದ ಪೂಜೆ ಸಮರ್ಪಿಸಲಾಯಿತು. ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶಾಸನ ದೇವತೆಗಳಿಗೆ ಆರಾಧನೆ ನಡೆಯಿತು.
ವಿದ್ಯುತ್ ದೀಪಾಲಂಕಾರದಿಂದ ಜಿನಮಂದಿರಗಳು ಶೋಭಿಸುವ ದೃಶ್ಯವು ಭಕ್ತರಿಗೆ ಧನ್ಯತಾಭಾವ ಉಂಟಾಯಿತು. ರಾತ್ರಿ ಅಷ್ಟಾವಧಾನ, ಉತ್ಸವ, ಪ್ರಸಾದ ವಿತರಣೆ ಸಾಂಗವಾಗಿ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.