ರಿಪ್ಪನ್‌ಪೇಟೆ ; ಹುಂಚ ಗ್ರಾ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರು ಇಲ್ಲಿಗೆ ಶ್ರೀಗಂಧ ಫೌಂಡೇಶನ್ (ರಿ) ಬೆಂಗಳೂರು ವತಿಯಿಂದ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿ, ಬ್ಯಾಗ್ ಹಾಗೂ ರೇನ್ ಕೋಟ್ ವಿತರಿಸಲಾಯಿತು.
ಹತ್ತು ವರ್ಷಗಳಿಂದ ಶಾಲೆಗೆ ನಿರಂತರವಾಗಿ ಕಲಿಕಾ ಸಾಮಗ್ರಿ, ಶಾಲೆಗೆ ಅಗತ್ಯ ಕಂಪ್ಯೂಟರ್, ಟಿವಿ, ಪ್ರಿಂಟರ್ ಮುಂತಾದ ಅಗತ್ಯತೆಗಳನ್ನು ಪೂರೈಸುತ್ತಲೇ ಬಂದಿರುವ ಸಂಸ್ಥೆಯೊಂದಿಗಿನ ಒಡನಾಟಕ್ಕೆ, ದಶ ವರ್ಷ ಪೂರೈಸಿದ ಹರ್ಷಕ್ಕೆ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ವಿವಿಧ ಅಭಿಪ್ರಾಯ ಸಂಗ್ರಹಣೆಯ ‘ದಶಕ ಸಂಚಿಕೆ’ ಬಿಡುಗಡೆ ಮಾಡಲಾಯಿತು.

ಸಂಸ್ಥೆಯ ರೂವಾರಿಗಳಲ್ಲೊಬ್ಬರಾದ ಸುಂದರೇಶ್ ಮಾತನಾಡಿ, ಶಾಲೆಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಎಲ್ಲರೂ ಉಳ್ಳವರಾಗಿ ಬಡತನ ನಿರ್ಮೂಲನೆಯಾಗಲಿ ಸಶಕ್ತ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು.
ಶ್ರೀಧರಮೂರ್ತಿ ಕಡಸೂರು ಮಾತನಾಡಿ, ಸದ್ಗುಣಗಳ ಗಂಧವಾಹಕರಂತಿರುವ ಶ್ರೀಗಂಧ ಫೌಂಡೇಶನ್ ನ ಕಾರ್ಯವ್ಯಾಪ್ತಿಯ ಅಗಾಧತೆ ಕುರಿತು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ದಾನಿಗಳಾದ ಅಭಿನವ್ ಕಲ್ಪನಾ ದಂಪತಿಗಳನ್ನು ಗೌರವಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ್ ಶ್ರೀಗಂಧ ಫೌಂಡೇಶನ್‌ನ ಅಧ್ಯಕ್ಷ ಪ್ರಶಾಂತ್ ಪತಂಗೆ, ನಿಕಟಪೂರ್ವ ಅಧ್ಯಕ್ಷ ಆನಂದ, ಫೌಂಡೇಶನ್‌ನ ಸದಸ್ಯರು, ಮುಖ್ಯಶಿಕ್ಷಕಿ ರತ್ನಕುಮಾರಿ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮಸ್ಥರು, ಪೋಷಕವೃಂದ, ಹಿರಿಯ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.