ಶಿವಮೊಗ್ಗ : ಉಪಗ್ರಹ ಚಿತ್ರಗಳಲ್ಲಿ ಕಾಣುವ ಹಸಿರು ಛಾಯೆಯನ್ನು ಮಾತ್ರ ಆಧರಿಸಿ ಮಲೆನಾಡಿನ ಜನವಸತಿ ಹಾಗೂ ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯ ಮತ್ತು ದಟ್ಟ ಅರಣ್ಯವೆಂದು ಗುರುತಿಸುತ್ತಿರುವುದು ಸಂಪೂರ್ಣ ಅವೈಜ್ಞಾನಿಕ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ವಿವರಿಸಿದರು.
ರೈತರ ಹಕ್ಕುಗಳಿಗೆ ಧಕ್ಕೆ:
ಉಪಗ್ರಹ ಚಿತ್ರಗಳನ್ನಿಟ್ಟುಕೊಂಡು ಪ್ರದೇಶಗಳ ಸ್ವರೂಪ ನಿರ್ಧರಿಸುತ್ತಿರುವುದರಿಂದ ಮಲೆನಾಡಿಗರ ಕೃಷಿ ಜಮೀನು ಹಾಗೂ ಮೂಲಭೂತ ಹಕ್ಕುಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಉಭಯ ಸದನಗಳಲ್ಲಿ ಧ್ವನಿ ಎತ್ತಬೇಕು.
ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ:
ಶರಾವತಿ, ಚಕ್ರ, ವರಾಹಿ, ತುಂಗಾ, ಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳಿಗಾಗಿ ಭೂಮಿ ತ್ಯಾಗ ಮಾಡಿದ ಸಂತ್ರಸ್ತರಿಗೆ ನೀಡಲಾಗಿದ್ದ ಪರ್ಯಾಯ ಭೂಮಿಯ ಹಕ್ಕುಪತ್ರಗಳನ್ನೇ ಪ್ರಶ್ನಿಸಿ ರದ್ದುಗೊಳಿಸುವ ಕ್ರಮಗಳು ನಡೆಯುತ್ತಿವೆ.
ಹಕ್ಕುಪತ್ರ ರದ್ದು ಪ್ರಕ್ರಿಯೆ:
1952ರಿಂದ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಪಡೆದ ಸುಮಾರು 50 ಸಾವಿರ ರೈತರ ಮಂಜೂರಾತಿಗಳನ್ನು ಕಾನೂನುಬಾಹಿರವೆಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ. 1890-1930ರ ಬ್ರಿಟಿಷರ ಹಾಗೂ ಮಹಾರಾಜರ ಕಾಲದ ದಾಖಲೆಗಳನ್ನು ಮುಂದಿಟ್ಟುಕೊಂಡು ಪಹಣಿಯಲ್ಲಿ ‘ಅರಣ್ಯ’ ಎಂದು ನಮೂದಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿಗಳ ಕಡೆಗಣನೆ:
ಗೋಮಾಳ, ಹುಲ್ಲುಬನಿ, ಸೊಪ್ಪಿನಬೆಟ್ಟ ಹಾಗೂ ಕಾನು ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳನ್ನು ಗ್ರಾಮ ಪಂಚಾಯಿತಿಗಳ ಅಭಿಪ್ರಾಯ ಪಡೆಯದೆಯೇ ಏಕಪಕ್ಷೀಯವಾಗಿ ಅರಣ್ಯವೆಂದು ಬದಲಾಯಿಸಲಾಗಿದೆ.
ಅರಣ್ಯ ಹಕ್ಕು ಕಾಯ್ದೆ ವೈಫಲ್ಯ:
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ವಾಸ್ತವ ಸ್ಥಿತಿ ಪರಿಶೀಲನೆ ನಡೆಯುತ್ತಿಲ್ಲ. 2006ರ ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಸುಮಾರು 80 ಸಾವಿರ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ.
ಕಸ್ತೂರಿ ರಂಗನ್ ವರದಿ ಕಸದ ಬುಟ್ಟಿಗೆ ಸೇರಲು ಯೋಗ್ಯ:
ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸ್ಥಳೀಯ ವಾಸ್ತವತೆ ಹಾಗೂ ಗ್ರಾಮ ಸಭೆಗಳ ಒಪ್ಪಿಗೆ ಇಲ್ಲದೆ ತಯಾರಿಸಲಾಗಿರುವ ಕಸ್ತೂರಿ ರಂಗನ್ ವರದಿ ಕಸದ ಬುಟ್ಟಿಗೆ ಸೇರಲು ಯೋಗ್ಯವಾಗಿದೆ. ಮಲೆನಾಡಿನ ವಾಸ್ತವ ಬೆಳವಣಿಗೆಗಳ ಅರಿವಿಲ್ಲದೆ, ಜಂಟಿ ಸರ್ವೇ ನೆಪವೊಡ್ಡಿ ಪರಸ್ಪರ ಜವಾಬ್ದಾರಿ ವರ್ಗಾಯಿಸುತ್ತಿರುವ ಜನಪ್ರತಿನಿಧಿಗಳ ಧೋರಣೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಅವರು ದೂರಿದರು.

