ಹೊಸನಗರ ; ಸಂಸ್ಕೃತಿಯ ಉಳಿವಿನಲ್ಲಿ ಸಾಹಿತ್ಯದ ಪಾತ್ರವೂ ಮಹತ್ವದ್ದಾಗಿದ್ದು ರಾಮಾಯಣ, ಮಹಾಭಾರತ, ಭಾಗವತದಂತಹ ಸಾಹಿತ್ಯವನ್ನು ಪಾರಾಯಣ ಮಾಡುವ ಜೊತೆಗೆ ಅಧ್ಯಯನವನ್ನೂ ಮಾಡಬೇಕೆಂದು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೌಂಡೇಶನ್ನಿನ ಸ್ಥಾಪಕರೂ ಹಾಗೂ ಅಧ್ಯಕ್ಷರು ಆದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿ ಕರೆ ನೀಡಿದ್ದಾರೆ.
ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ ಎರಡು ದಿನಗಳ ಸಾಹಿತ್ಯ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿಷ್ಣು ಸಹಸ್ರನಾಮದ ಮಹತ್ವವನ್ನು ತಿಳಿಸಿದ ಅವರು, ಜಗತ್ತಿನ ಅನೇಕ ದೇಶಗಳಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವವರಿದ್ದಾರೆ. ನಮ್ಮ ದೇಶದ ಇಂಥ ಅನೇಕ ಸಾಹಿತ್ಯದ ಕುರಿತು ವಿಶ್ವದಲ್ಲಿ ಆಸಕ್ತಿ ಹೆಚ್ಚುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಶಿವಮೊಗ್ಗದ ಅಜೇಯ ದಿನಪತ್ರಿಕೆ ಸಂಪಾದಕ ಎಂ.ಶ್ರೀನಿವಾಸನ್ ಬರೆದಿರುವ ‘ನನ್ನ ಕೃಷ್ಣ’ ಹಾಗೂ ಶಿಕ್ಷಕಿ ಡಾ.ಅಂಜಲಿ ಅಶ್ವಿನ್ ಬರೆದ ‘ಮಹಿಳೆ : ಸಾಧನೆ-ವೇದನೆ-ಸಂವೇದನೆ’ ಹಾಗೂ ‘ಗೋಡೆಯಲ್ಲಿ ಗೀಚಿದ್ದು’ ಕೃತಿಗಳನ್ನು ಅನಾವರಣಗೊಳಿಸಲಾಯಿತು. ವಸಂತಲಕ್ಷ್ಮಿ ಬಿಡುಗಡೆ ಮಾಡಿದರು.
‘ನನ್ನ ಕೃಷ್ಣ’ ಕೃತಿ ಪರಿಚಯಿಸಿದ ಮತ್ತೂರಿನ ಟಿ. ಎನ್. ಸ್ವಾಮಿಯವರು ಕೃಷ್ಣ ಎಲ್ಲರಿಗೂ ಪ್ರಿಯ. ಕೃಷ್ಣನ ಕುರಿತು ಇರುವ ಎಲ್ಲ ಗ್ರಂಥಗಳ ಸಾರ ಸರ್ವಸ್ವವನ್ನೂ ಶ್ರೀನಿವಾಸನ್ ಈ ಕೃತಿಯಲ್ಲಿ ಸರಳ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.
ಮಹಿಳೆ : ಸಾಧನೆ-ವೇದನೆ-ಸಂವೇದನೆ ಹಾಗೂ ಗೋಡೆಯಲ್ಲಿ ಗೀಚಿದ್ದು ಕೃತಿಯ ಪರಿಚಯ ಮಾಡಿಕೊಟ್ಟ ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಡಾ. ರತ್ನಾಕರ ಸಿ. ಕುನಗೋಡು, ಗೀತಾ ನಾಗಭೂಷಣ ಹಾಗೂ ಡಾ||ಅನುಪಮಾ ನಿರಂಜನರ ಕಾದಂಬರಿಯ ಆಧಾರದಲ್ಲಿ ಅಧ್ಯಯನ ಮಾಡಿದ ಕೃತಿಯು ಹೊಸನಗರದ ಹೈಸ್ಕೂಲ್ ವಿಬಾಗದ ಶಿಕ್ಷಕಿ ಅಂಜಲಿ ಅಶ್ವಿನ್ ಕುಮಾರ್ ಯವರ ಸುಂದರ ಶೈಲಿಯಲ್ಲಿ ಅನಾವರಣಗೊಂಡಿದ್ದು ಲೇಖಕಿಯ ಸಾಹಿತ್ಯ ರಚನೆಯಲ್ಲಿ ಭರವಸೆ ಮೂಡಿಸಿದ್ದಾರೆ ಎಂದರು.

ಸಾಹಿತಿ ವಂದಗದ್ದೆ ಚಂದ್ರಮೌಳಿ ಹಾಗೂ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭೋಜಪ್ಪನವರನ್ನು ಸನ್ಮಾನಿಸಲಾಯಿತು. ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಮಾತನಾಡಿದರು.
ಹಾದಿಗಲ್ಲು ಲಕ್ಷ್ಮಿನಾರಯಣ ಅಧ್ಯಕ್ಷತೆ ವಹಿಸಿದ್ದರು. ಇಬ್ಬರೂ ಲೇಖಕರನ್ನು ಅಭಿನಂದಿಸಲಾಯಿತು. ಹನಿಯ ಗುರುಮೂರ್ತಿ ಪ್ರಾರ್ಥಿಸಿ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಸ್ವಾಗತ ಪ್ರಸ್ತಾವನೆ ಮಾಡಿ, ವಸುಧಾ ಚೈತನ್ಯ ನಿರೂಪಿಸಿ ,ವಿನಾಯಕ ಪ್ರಭು ವಂದಿಸಿದರು.
ಇದೇ ಸಂದರ್ಭದಲ್ಲಿ ಭಜನಾ ಸಂಗಮ ಹಾಗೂ ಕಲಾಭಾರತಿ ನೃತ್ಯ ಶಾಲೆ ಕಾರಣಗಿರಿ, ಸುವರ್ಧಿನಿ ನೃತ್ಯ ಶಾಲೆ ಮಾರುತಿಪುರ ಹಾಗೂ ಕು.ಶಮಾ ಕಿರುಗುಡಿಗೆಯವರ ಭರತನಾಟ್ಯ ಪ್ರದರ್ಶನ ನಡೆಯಿತು. ಸಾಹಿತ್ಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಗೊಳಿಸಲಾಗಿತ್ತು.