HOSANAGARA ; ಮನೆಯ ಮುಂಬಾಗಿಲು ಮುರಿದು ಹಾಡಹಗಲೇ ಚಿನ್ನಾಭರಣ ಕಳುವು ಮಾಡಿದ ಘಟನೆ ತಾಲೂಕಿನ ಮಾರುತಿಪುರದಲ್ಲಿ ಬುಧವಾರ ನಡೆದಿದೆ.
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ನಿವಾಸಿ ಸುರೇಂದ್ರ ಹೊಳ್ಳ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆ ನುಗ್ಗಿದ್ದಾರೆ. ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. 60 ಗ್ರಾಂ ತೂಕದ ಎರಡು ನೆಕ್‌ಲೇಸ್, 10 ಗ್ರಾಂ ತೂಕದ ಮುತ್ತಿನ ಸರ, 36 ಗ್ರಾಂ ತೂಕದ ಬಳೆ, 20 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಮೂರು ಉಂಗುರ ಸೇರಿದಂತೆ ಒಟ್ಟು 150 ಗ್ರಾಂ ತೂಕದ ಆಭರಣಗಳು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯ ಮಾಲಿಕ ಮಾರುತಿಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಕಳುವಾದ ಸಮಯದಲ್ಲಿ ತಮ್ಮ ಹೋಟೆಲ್‌ನಲ್ಲಿದ್ದರು. ಇವರ ಪತ್ನಿ ತಮ್ಮ ಮಗನ ಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ ಸಭೆಗೆ ತೆರಳಿದ್ದರು. ಈ ಚಿಕ್ಕ ಅವಧಿಯಲ್ಲಿಯೇ ಕಳ್ಳತನ ನಡೆದಿದೆ. ಅಲ್ಲದೇ ಕಳುವಾದ ಮನೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು, ಜನನಿಬಿಡ ಸ್ಥಳವಾಗಿದೆ. ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಯಾರ ಅರಿವಿಗೂ ಬಾರದಂತೆ ಹಾಡಹಗಲೇ ಕೃತ್ಯ ನಡೆದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಅಲ್ಲದೇ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳು ಸ್ಥಳ ಪರೀಶೀಲಿಸಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.