ಶಿವಮೊಗ್ಗ ಸುದ್ದಿ

ಬೆಳೆ ವಿಮೆ: ಕಟ್ಟುವಾಗ ಮುಂದು, ಕೊಡುವಾಗ ಹಿಂದು – ವಿಮಾ ಕಂಪನಿ ವಿರುದ್ಧ ಸಿಡಿದೆದ್ದ ತೀರ್ಥಹಳ್ಳಿ ರೈತರು

ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ನದಾತರಿಗೆ ನಿರಂತರವಾಗಿ ವಂಚನೆಯಾಗುತ್ತಿದ್ದು, ಪ್ರೀಮಿಯಂ ಕಟ್ಟಿಸಿಕೊಳ್ಳುವಾಗ ಮುಂದಾಗಿದ್ದ ಆಡಳಿತ ಮಂಡಳಿ ಈಗ ಮೌನ ವಹಿಸಿರುವುದು ಅನ್ಯಾಯ ಎಂದು ರೈತ ಮುಖಂಡ ಪಣಿರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Crop Insurance Thirthahalli

ತೀರ್ಥಹಳ್ಳಿ: ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ನದಾತರಿಗೆ ನಿರಂತರವಾಗಿ ವಂಚನೆಯಾಗುತ್ತಿದ್ದು, ಪ್ರೀಮಿಯಂ ಕಟ್ಟಿಸಿಕೊಳ್ಳುವಾಗ ಮುಂದಾಗಿದ್ದ ಆಡಳಿತ ಮಂಡಳಿ ಈಗ ಮೌನ ವಹಿಸಿರುವುದು ಅನ್ಯಾಯ ಎಂದು ರೈತ ಮುಖಂಡ ಪಣಿರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾರತಮ್ಯ ಎಸಗಿರುವ ವಿಮಾ ಸಂಸ್ಥೆಯ ಪ್ರತಿನಿಧಿಗಳು ಮುಖಾಮುಖಿ ಚರ್ಚೆಗೆ ಹಾಜರಾಗಬೇಕೆಂದು ಅವರು ಪಟ್ಟುಹಿಡಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತೋಟಗಾರಿಕೆ ಇಲಾಖೆಯ ಕಚೇರಿ ಎದುರು ಕಟ್ಟೆಹಕ್ಕಲು, ಶೇಡ್ಗಾರ್‌ ಹಾಗೂ ಹೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಂಗಳವಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ವಿಮೆಯನ್ನೇ ನೆಚ್ಚಿಕೊಂಡಿದ್ದರು. ಆದರೆ, ಪರಿಹಾರ ಹಂಚಿಕೆಯಲ್ಲಿ ತೀವ್ರ ಅಸಮಾನತೆ ಕಂಡುಬಂದಿದ್ದು, ಅಕ್ಕಪಕ್ಕದ ಊರುಗಳಲ್ಲೇ ಒಬ್ಬರಿಗೆ ₹72,000 ಸಂದಾಯವಾದರೆ, ಮತ್ತೊಬ್ಬರಿಗೆ ಕೇವಲ ₹14,000 ಜಮೆಯಾಗಿದೆ. ಈ ಅನ್ಯಾಯವನ್ನು ಕೂಡಲೇ ಸರಿಪಡಿಸಿ, ಅರ್ಹರಿಗೆ ಸಂಪೂರ್ಣ ಪರಿಹಾರ ಒದಗಿಸಬೇಕು ಹಾಗೂ ಲೆಕ್ಕಾಚಾರದ ಪಾರದರ್ಶಕ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಕೇಳೂರು ಮಿತ್ರ, “ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ರೈತರಿಗೆ ಇದೇ ರೀತಿಯ ಮೋಸವಾಗುತ್ತಿದೆ. ಪಂಚಾಯಿತಿ ಮಟ್ಟದ ಕೆಎಸ್‌ಎನ್‌ಡಿಎಂಸಿ ಮಳೆ ಮಾಪಕಗಳು ನಿಖರವಾಗಿ ಕೆಲಸ ಮಾಡುತ್ತಿಲ್ಲ. ಮಳೆ ಬಿದ್ದ ಹಾಗೂ ಬೀಳದ ಪ್ರದೇಶಗಳ ವ್ಯತ್ಯಾಸ ಗುರುತಿಸಲು ಈ ಯಂತ್ರಗಳು ವಿಫಲವಾಗಿವೆ. ತಾಲ್ಲೂಕಿನಾದ್ಯಂತ ಕೇವಲ 7–8 ಮಳೆ ಮಾಪನ ಕೇಂದ್ರಗಳಿರುವುದು ವ್ಯವಸ್ಥೆಯ ದುರವಸ್ಥೆಗೆ ಹಿಡಿದ ಕನ್ನಡಿ,” ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ರಂಜಿತ್‌ ಎಸ್., ರೈತರ ಅಹವಾಲು ಆಲಿಸಿ, “ಪ್ರೀಮಿಯಂ ಪಾವತಿಸಿದ ಪ್ರತಿಯೊಬ್ಬ ರೈತರಿಗೂ ಪ್ರಶ್ನಿಸುವ ಹಕ್ಕಿದೆ. ಸರ್ಕಾರದ ಷರತ್ತುಗಳು ಹಾಗೂ ಪರಿಷ್ಕೃತ ನಿಯಮಾವಳಿಗಳ ಅನ್ವಯವೇ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 15 ದಿನಗಳ ಕಾಲಾವಕಾಶ ನೀಡಿದರೆ, ವಿಮಾ ಕಂಪನಿಯ ಗುತ್ತಿಗೆದಾರರನ್ನು ಕರೆಸಿ ರೈತರೊಂದಿಗೆ ನೇರ ಸಮಾಲೋಚನೆ ನಡೆಸಲು ವೇದಿಕೆ ಕಲ್ಪಿಸಲಾಗುವುದು,” ಎಂದು ಭರವಸೆ ನೀಡಿದರು.

ಧರಣಿಯಲ್ಲಿ ಕೆಡಿಪಿ ಸದಸ್ಯರಾದ ಕರುಣಾಕರ ಜೋಗಿಮಾದ್ಲು, ಪೂರ್ಣೇಶ್‌ ಕೆಳಕೆರೆ ಸೇರಿದಂತೆ ಪ್ರಮುಖರಾದ ಚಂದ್ರಶೇಖರ, ಕಲ್ಗುಂಡಿ ಸಂದೀಪ್‌, ಆದರ್ಶ ಹುಂಚದಕಟ್ಟೆ ಹಾಗೂ ಕುಡುಮಲ್ಲಿಗೆ ಸಂದೀಪ್‌ ಭಾಗವಹಿಸಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]