HOSANAGARA ; ಪಟ್ಟಣದ ಹೊರ ವಲಯದ ಕುವೆಂಪು ಶಾಲೆಯ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ಹಸುವಿನ ಶವ ಪತ್ತೆಯಾದ ಘಟನೆ ನಡೆದಿದೆ.
ಪಟ್ಟಣದಿಂದ ಸುಮಾರು 0.5 ಕಿ.ಮೀ. ದೂರದಲ್ಲಿ ಹೊಸನಗರದ ಕೆಲವು ಯುವಕರು ರಮೀತ್‌ರವರ ನೇತೃತ್ವದಲ್ಲಿ ಗೋ ಶಾಲೆಯನ್ನು ಆರಂಭಿಸಿದ್ದು ಆ ಗೋಶಾಲೆಯಲ್ಲಿ 10-20 ಬೀದಿ ಹಸುಗಳು ಇದರ ಜೊತೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಹಸು, ಕರುಗಳನ್ನು ಬಿಡಾಡಿ ದನಗಳನ್ನು ಸಾಕುತ್ತಿದ್ದರು. ಭಾನುವಾರ ರಾತ್ರಿ 12 ಗಂಟೆಯವರೆಗೆ ಗೋ ಶಾಲೆಯ ಗೋ ಸೇವಕರು ದನ-ಕರುಗಳಿಗೆ ಆಹಾರ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ದನದ ಕೊಟ್ಟಿಗೆಗೆ ಹೋಗಿ ಒಂದು ದನವನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪವಿದ್ದ ದನಗಳಿಗೆ ನೀರುಣಿಸುವ ಬಾವಿಗೆ ನೇತು ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ, ಪರಿಶೀಲನೆ ;
ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೇಕ್ಟರ್ ಶಂಕರಗೌಡ ಪಾಟೇಲ್ ನೇತೃತ್ವದ ಪೋಲೀಸ್ ತಂಡ ನೇಣು ಬಿಗಿದ ಸ್ಥಿತಿಯಲ್ಲಿರುವ ದನದ ಶವವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿಯಾದ ಕೆ.ಟಿ ರಾಜಪ್ಪ, ರಾಜೇಶ್, ಸುರೇಶ, ಶಿವರಾಜ್ ಬಿ.ಜೆ, ಕೃಷ್ಣಚಾರಿ ಹೇಮಾಂತ್‌ಕುಮಾರ್‌ರವರ ಸಹಾಯದಿಂದ ನೇಣು ಹಾಕಿರುವ ಕುಣಿಕೆ ತಪ್ಪಿಸಿ ಬಾವಿಯಿಂದ ದನವನ್ನು ಮೇಲೆತ್ತಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್, ಮಧುಸೂದನ್ ಎ.ಹೆಚ್.ಸಿ, ಸುನೀಲ್, ಜಗದೀಶ್ ಇನ್ನೂ ಮುಂತಾದವರು ಇದ್ದರು.
ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ :
ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಂಜೀವ್ ರವರು ಯಾರೇ ತಪ್ಪು ಮಾಡಿದರೂ ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕು. ತಪ್ಪಿತಸ್ಥರನ್ನು ಆದಷ್ಟು ಬೇಗ ಹುಡುಕುವ ಕಾರ್ಯ ಪೋಲೀಸ್ ಇಲಾಖೆ ಕೈಗೊಳ್ಳಲಿ. ಮುಂದೆ ಇಂತಹ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಜಾಗೃತಿ ವಹಿಸಲಿ ಎಂದರು.