ಶಿಕಾರಿಪುರ ; ತಾಲ್ಲೂಕಿನ ಬೈರಾಪುರ ಬಳಿಯ ಅಂಬ್ಲಿಗೊಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ 8-10 ವರ್ಷದ ಗಂಡು ಹುಲಿ ಮೃತದೇಹ ಪತ್ತೆಯಾಗಿದೆ.
ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ರಾತ್ರಿ ಮೀನು ಹಿಡಿಯಲು ಹೋಗಿದ್ದವರು ನೀರಿನಲ್ಲಿ ಹುಲಿ ತೇಲುತ್ತಿರುವುದು ಗಮನಿಸಿದ್ದಾರೆ. ನಂತರ ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹುಲಿಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಅರಣ್ಯ ಇಲಾಖೆಯ ಡಾಟಾಬೇಸ್‌ನಲ್ಲೂ ಇಲ್ಲಿ ಸತ್ತಿರುವ ಹುಲಿಯ ಬಗ್ಗೆ ಮಾಹಿತಿ ಇಲ್ಲ. ಅದು ಎಲ್ಲಿಂದ ಬಂದಿದೆ? ಹಿನ್ನೀರಿನತ್ತ ಏಕೆ ಬಂದಿದೆ? ಎಂಬುದರ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹುಲಿಯ ಕಳೇಬರವನ್ನು ಮಂಗಳವಾರ ಬೆಳಿಗ್ಗೆ ಹಿನ್ನೀರಿನಿಂದ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ಕೈಗೊಂಡಿದ್ದೇವೆ. ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿಯ ನಂತರ ಹುಲಿಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಸಾಗರ ವನ್ಯಜೀವಿ ವಿಭಾಗದ ಡಿಸಿಎಫ್ ಡಿ.ಮೋಹನ್‌ಕುಮಾರ್ ತಿಳಿಸಿದ್ದಾರೆ.

ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ
ಆನಂದಪುರ ವಲಯ ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.