ತೀರ್ಥಹಳ್ಳಿ: ತಾಲ್ಲೂಕಿನ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಭಕ್ತರಿಂದ ಒಟ್ಟು ₹1,01,73,650 ನಗದು ಕಾಣಿಕೆ ಸಂಗ್ರಹವಾಗಿದೆ.
ಒಂದು ಕೋಟಿ ಒಂದು ಲಕ್ಷ ಎಪ್ಪತ್ತ್ಮೂರು ಸಾವಿರ ಆರುನೂರ ಐವತ್ತು ರೂಪಾಯಿ ನಗದು ಸಂಗ್ರಹವಾಗಿದ್ದು, ಇದರ ಜೊತೆಗೆ ಭಕ್ತಾದಿಗಳು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನೂ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.
ಹುಂಡಿ ಎಣಿಕೆ ಬಳಿಕ ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹುಂಡಿ ಎಣಿಕೆ ಕಾರ್ಯದ ವೇಳೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಕುಮಾರ್ ಹಾಗೂ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಮುಜರಾಯಿ ತಹಸೀಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಸಮಿತಿಯ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

