ರಿಪ್ಪನ್‌ಪೇಟೆ : ಕನ್ನಡ ಸಾಹಿತ್ಯದ ಮಹಾಮುನಿ, ಕಾದಂಬರಿಗಳ ಚಕ್ರವರ್ತಿ, ಅನನ್ಯ ಚಿಂತಕ ಎಸ್. ಎಲ್. ಭೈರಪ್ಪರ ಅಗಲಿಕೆಯಿಂದ ಸಾಹಿತ್ಯ ಜಗತ್ತು ಶೂನ್ಯವಾಗಿದೆ. ಈ ಅಶಕ್ತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ರಿಪ್ಪನ್‌ಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಗ್ರಾಮ ಪಂಚಾಯಿತಿ ಕುವೆಂಪು ಸಭಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮಂಜುನಾಥ್ ಕಾಮತ್, “ಭೈರಪ್ಪರು ವಾಸ್ತವಾಧಾರಿತ ಕಾದಂಬರಿಗಳ ಮೂಲಕ ಸಮಾಜದ ನಾಡಿಯನ್ನು ಸೂಕ್ಷ್ಮವಾಗಿ ಸ್ಪರ್ಶಿಸಿದರು. ಅವರ ಕೃತಿಗಳು ಕಾಲಾತೀತವಾಗಿದ್ದು, ಮುಂದಿನ ಪೀಳಿಗೆಗೂ ದಾರಿದೀಪವಾಗಿವೆ” ಎಂದು ಹೇಳಿದರು.

ಹಿರಿಯ ಸಾಹಿತಿ ಹ.ಅ. ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಭೈರಪ್ಪರ ಕಾದಂಬರಿಗಳು ಕೇವಲ ಸಾಹಿತ್ಯವಲ್ಲ, ಅದು ಬದುಕಿನ ನಿಜಸ್ವರೂಪವನ್ನು ಬಿಚ್ಚಿಟ್ಟ ತತ್ವಶಾಸ್ತ್ರ. ಅವರ ಬರಹ ಕನ್ನಡದ ಆಳ ಮತ್ತು ಅಗಾಧತೆಯನ್ನು ಜಗತ್ತಿಗೆ ತೋರಿಸಿತು” ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ, “ಸಾಹಿತ್ಯ ಕೇವಲ ಓದುಗರಿಗೆ ಮಾತ್ರವಲ್ಲ, ಸಾಮಾನ್ಯ ಜನರ ಬದುಕಿಗೂ ಮಾರ್ಗದರ್ಶನ ನೀಡಬೇಕೆಂಬ ದೃಷ್ಟಿಕೋನವನ್ನು ಭೈರಪ್ಪರು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದರು. ಅವರ ಕೃತಿಗಳು ಗ್ರಾಮೀಣ ಬದುಕನ್ನೂ ಸಮಾನವಾಗಿ ಬೆಳಗಿಸಿವೆ” ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ರಾಧಾಕೃಷ್ಣ ಹೆಚ್.ಎ. ಅವರು, “ಭೈರಪ್ಪರು ನಮ್ಮ ವಿದ್ಯಾರ್ಥಿಗಳಿಗೆ ಮಾದರಿ. ಅವರ ಕೃತಿಗಳನ್ನು ಓದಿದರೆ ಕೇವಲ ಸಾಹಿತ್ಯದ ಆನಂದವಲ್ಲ, ಬದುಕನ್ನು ಅರ್ಥಮಾಡಿಕೊಳ್ಳುವ ಶಕ್ತಿ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಸಭೆಯ ಅಂತ್ಯದಲ್ಲಿ ಭೈರಪ್ಪರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್ ರಾಘವೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಪಿಯೂಸ್ ರೋಡ್ರಿಗಸ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.