ಹೊಸನಗರ ; ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಸ. ನಂ.18 ರ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಪರಿವರ್ತಿಸಿ ಬೈಕಿನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಚೋರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಶನಿವಾರ ನಡೆದಿದೆ.
ಬಂಧಿತರನ್ನು ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆ ವಾಸಿ ರಾಘವೇಂದ್ರ (32) ಎಂದು ಗುರುತಿಸಲಾಗಿದೆ.

ಹೊಸಕೆಸರೆ ಗ್ರಾಮದ ನೀರೇರಿ ವಾಸಿ ಎಂ. ಭದ್ರಪ್ಪ ಅಲಿಯಾಸ್ ಕರಿಮಂಜ (32) ಎಂಬಾತ ತಪ್ಪಿಸಿಕೊಂಡಿದ್ದು, ಈತನ ಪತ್ತೆಗೆ ಬಲೆ ಬೀಸಲಾಗಿದೆ. ಈ ಕೃತ್ಯದಲ್ಲಿ ಒಟ್ಟು 18 ಕೆ.ಜಿ ಶ್ರೀಗಂಧ ಹಾಗೂ ಸಾಗಾಣಿಕೆಗೆ ಉಪಯೋಗಿಸಿದ 03 ಬಜಾಜ್ ಡಿಸ್ಕವರ್ ಕಂಪನಿಯ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಹರತಾಳು ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಕೆ ಎನ್., ಸಿಬ್ಬಂದಿಗಳಾದ ಪುಟ್ಟಸ್ವಾಮಿ ಕೆ. ವಿ, ಭರತ್ ಕುಮಾರ್, ಸುರೇಶ್ ವಿ, ರಾಜು ಎನ್, ಪ್ರಶಾಂತ ಜಿ, ವಾಹನ ಚಾಲಕ ಮಹೇಶ್ ಇನ್ನಿತರರು ಪಾಲ್ಗೊಂಡಿದ್ದರು.