Hosanagara

ವಾರಾಹಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಿ: ವಿಕೇಂದ್ರೀಕೃತ ಸೋಲಾರ್ ಯೋಜನೆಗೆ ವೃಕ್ಷಲಕ್ಷ ಆಂದೋಲನ ಒತ್ತಾಯ

Auto Draft – varahi

ಹೊಸನಗರ: ಪಶ್ಚಿಮಘಟ್ಟಗಳ ಪರಿಸರದ ಮೇಲೆ ಈಗಾಗಲೇ ಹಲವು ಯೋಜನೆಗಳಿಂದ ಒತ್ತಡ ಹೆಚ್ಚಾಗಿರುವ ಸಂದರ್ಭದಲ್ಲಿ ವಾರಾಹಿ ಪಂಪ್ ಸ್ಟೋರೇಜ್ ಯೋಜನೆಗೆ ಸರ್ಕಾರ ಮುಂದಾಗಿರುವುದು ಆತಂಕಕಾರಿ ಎಂದು ವೃಕ್ಷಲಕ್ಷ ಆಂದೋಲನ ಸಮಿತಿ ಹೇಳಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿ, ಮಲೆನಾಡು ಮತ್ತು ಕರಾವಳಿ ಭಾಗದ ಸೂಕ್ಷ್ಮ ಪರಿಸರವನ್ನು ರಕ್ಷಿಸಲು ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸಬೇಕು. ವಾರಾಹಿ ಕಣಿವೆಯಲ್ಲಿ ಮತ್ತೊಂದು ದೊಡ್ಡ ಯೋಜನೆ ಕೈಗೊಳ್ಳುವುದು ಜೀವ ವೈವಿಧ್ಯ, ಅರಣ್ಯ ಮತ್ತು ಅಲ್ಲಿನ ಜನಜೀವನಕ್ಕೆ ಅಪಾಯ ಉಂಟುಮಾಡಬಹುದು ಎಂದು ಎಚ್ಚರಿಸಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿರುವ ಸಂದರ್ಭದಲ್ಲಿ, ವಾರಾಹಿ ಪಂಪ್ ಸ್ಟೋರೇಜ್ ಮೆಗಾ ಯೋಜನೆಯ ಸರ್ವೆ ಕಾರ್ಯಕ್ಕೆ ಅನುಮತಿ ನೀಡಲು ತಯಾರಿ ನಡೆಯುತ್ತಿದೆ ಎಂದು ಸಮಿತಿ ಆರೋಪಿಸಿದೆ. ಕರ್ನಾಟಕ ಪವರ್ ಕಾರ್ಪೊರೇಶನ್ ಮೂಲಕ ಯೋಜನೆಯ ಸರ್ವೆ ಪ್ರಸ್ತಾವನೆಗೆ ರಾಜ್ಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿರುವುದು ಪ್ರಶ್ನಾರ್ಹ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ವಾರಾಹಿ ಪಂಪ್ ಸ್ಟೋರೇಜ್ ಯೋಜನೆ ಮೂಕಾಂಬಿಕಾ ಮತ್ತು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಗೆ ಬರಲಿದೆ. ಮಾಣಿ ಮತ್ತು ಹುಲಿಕಲ್ ಅಣೆಕಟ್ಟುಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವಿದ್ದು, ಹೊಸ ಜಲಾಶಯ ನಿರ್ಮಾಣ ಹಾಗೂ ನೆಲದಡಿಯಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮಿಸುವ ಪ್ರಸ್ತಾವನೆಯೂ ಇದೆ. ಈ ಪ್ರದೇಶಗಳು ಕುಂದಾಪುರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಗಡಿ ಭಾಗಕ್ಕೆ ಸೇರಿವೆ.

ಬಾಳೆಬರೆ ಘಾಟ್, ಹೊಸಂಗಡಿ, ಮಾಸ್ತಿಕಟ್ಟೆ, ಯಡೂರು, ಹುಲಿಕಲ್, ಸಿದ್ದಾಪುರ, ಶಂಕರನಾರಾಯಣ ಸೇರಿದಂತೆ ಹಲವು ಹಳ್ಳಿಗಳು ಈಗಾಗಲೇ ಸೂಕ್ಷ್ಮ ಪರಿಸರ ಸ್ಥಿತಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆ ವಾರಾಹಿ ಕಣಿವೆ ಮತ್ತೊಂದು ಬೃಹತ್ ಜಲಾಶಯ ಯೋಜನೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂದು ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ ಎಂದು ಸಮಿತಿ ತಿಳಿಸಿದೆ.

ವಾರಾಹಿ ವಿದ್ಯುತ್ ಯೋಜನೆಗಳಿಂದ ಆ ಭಾಗದಲ್ಲಿ ಅರಣ್ಯ ಮತ್ತು ಪರಿಸರದ ಮೇಲೆ ಈಗಾಗಲೇ ಗಂಭೀರ ಪರಿಣಾಮಗಳು ಉಂಟಾಗಿವೆ. ಪಂಪ್ ಸ್ಟೋರೇಜ್ ಹೆಸರಿನಲ್ಲಿ ಘಟ್ಟ ಪ್ರದೇಶವನ್ನು ಮತ್ತಷ್ಟು ಹಾನಿಗೊಳಿಸುವ ನಿರ್ಧಾರಕ್ಕೆ ಸರ್ಕಾರ ಮುಂದಾಗಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಎಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತದ ಅಪಾಯ ಹೆಚ್ಚುತ್ತಿದೆ. ಈಗಿರುವ ಅಣೆಕಟ್ಟುಗಳ ಸುರಕ್ಷತೆಯ ಮೇಲೂ ಭೂಕುಸಿತದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಗಳು ಸೂಚಿಸುತ್ತಿವೆ ಎಂದು ಪರಿಸರ ವಿಜ್ಞಾನಿ ಡಾ. ಕೇಶವ ಹೆಚ್. ಕೊರ್ಸೆ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಸಮಿತಿ ತಿಳಿಸಿದೆ.

ಯೋಜನೆಯಿಂದ ಸಾವಿರಾರು ಎಕರೆ ಅರಣ್ಯ ಪ್ರದೇಶ, ಲಕ್ಷಾಂತರ ಮರಗಳು ಮತ್ತು ಚಿಕ್ಕ ಗಿಡಗಳು ನಾಶವಾಗುವ ಆತಂಕವಿದೆ. ಆದ್ದರಿಂದ ವಾರಾಹಿ ಪಂಪ್ ಸ್ಟೋರೇಜ್ ಯೋಜನೆಯನ್ನು ಕೂಡಲೇ ಕೈಬಿಟ್ಟು, ವಿದ್ಯುತ್ ಉತ್ಪಾದನೆಗಾಗಿ ವಿಕೇಂದ್ರೀಕೃತ ಸೋಲಾರ್ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯಸಭಾ ಸದಸ್ಯ ಶಾಂತಾರಾಂ ಸಿದ್ಧಿ ಅವರು ಕೂಡ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಘಟ್ಟ ಪ್ರದೇಶದ ಕಾಡುಗಳಲ್ಲಿ ವಾಸಿಸುವ ವನವಾಸಿಗಳು ಮತ್ತು ರೈತಾಪಿ ಕುಟುಂಬಗಳ ಬದುಕು ಈಗಾಗಲೇ ಸಂಕಷ್ಟದಲ್ಲಿದೆ. ಇಂತಹ ಬೃಹತ್ ಯೋಜನೆಗಳಿಂದ ಜನರು ನೆಲೆ ಕಳೆದುಕೊಳ್ಳುವ ಭೀತಿ, ವನ್ಯಜೀವಿಗಳ ಹಾವಳಿ ಮತ್ತು ಭೂಕುಸಿತದ ಅಪಾಯ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿರಿಯ ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ, ಹಿರಿಯ ಸಾಮಾಜಿಕ ಕಾರ್ಯಕರ್ತ ರವಿ ಹನಿಯ, ಸಾಗರ ಗ್ರಾಮಾಂತರ ವಿಜ್ಞಾನ ಕೇಂದ್ರದ ಸಂಚಾಲಕ ಕೆ. ವೆಂಕಟೇಶ್, ಪರ್ಯಾವರಣದ ತುಮರಿ ಅಶೋಕ, ನಗರ ಹೋಬಳಿಯ ಸಾಮಾಜಿಕ ಮುಖಂಡ ನಾರಾಯಣ ಕಾಮತ್, ಪರಿಸರ ಕಾರ್ಯಕರ್ತ ಚಾರ್ವಾಕ ಸುಬ್ರಹ್ಮಣ್ಯ, ವೃಕ್ಷ ಆಂದೋಲನದ ಮುಖಂಡ ಶ್ರೀಪಾದ ಬಿಚ್ಚುಗತ್ತಿ ಸೇರಿದಂತೆ ಹಲವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಜನಸಮಾವೇಶಗಳಲ್ಲಿ ಸಾವಿರಾರು ಮಂದಿ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರಗಳು ಜನರ ಅಭಿಪ್ರಾಯಕ್ಕೆ ತಕ್ಕ ಮಾನ್ಯತೆ ನೀಡಿಲ್ಲ. ಈಗ ವಾರಾಹಿ ಕಣಿವೆಯ ವಿಚಾರದಲ್ಲಿಯೂ ಸರ್ಕಾರ ಅದೇ ದಾರಿಯಲ್ಲಿ ಸಾಗಬಾರದು. ಪಶ್ಚಿಮಘಟ್ಟಗಳ ರಕ್ಷಣೆಗೆ ಜನಜಾಗೃತಿ ಅಗತ್ಯ ಎಂದು ವೃಕ್ಷಲಕ್ಷ ಆಂದೋಲನ ಸಮಿತಿ ಕರೆ ನೀಡಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650