HOSANAGARA ; ತಾಲೂಕಿನ ಆಲಗೇರಿಮಂಡ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಕೆ.ಭದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಎಚ್.ಪಿ.ಸತ್ಯನಾರಾಯಣ ಇವರು ಅವಿರೋಧ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸಂಘದ ಕಛೇರಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಮುರುಗೇಶ್ ಕಾರ‍್ಯನಿರ್ವಹಿಸಿದರು.
ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಆಡಳಿತ ಮಂಡಳಿ ಸದಸ್ಯ ಹಾಗೂ ಜಿಲ್ಲಾ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಆಲಗೇರಿಮಂಡ್ರಿ ಸಹಕಾರಿ ಸಂಘ ತನ್ನ ಸದಸ್ಯರ ಹಿತ ಕಾಯುವಲ್ಲಿ ಯಶಸ್ವಿಯಾಗಿದೆ. ಇಂದು ಹಣಕಾಸು ವ್ಯವಹಾರಗಳಿಗೆ ವಾಣಿಜ್ಯ ಬ್ಯಾಂಕ್‌ಗಳೂ ಸೇರಿದಂತೆ ವಿವಿಧ ಬಗೆಯ ಸಂಸ್ಥೆಗಳಿವೆ. ಆದರೆ ಎಲ್ಲವೂ ಲಾಭ ಗಳಿಸುವುದೇ ಮೊದಲ ಆದ್ಯತೆಯಾಗಿರುತ್ತವೆ. ಆದರೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಗಳಿಸುವ ಲಾಭ ಸಹಾ ರೈತರಿಗೇ ಲಾಭಾಂಶದ ರೂಪದಲ್ಲಿ ದೊರೆಯುತ್ತದೆ. ಈ ಕಾರಣಕ್ಕೆ ಹೆಚ್ಚಿನ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹಾರ ನಡೆಸಬೇಕೆಂದರು.
ಎ.ಕೆ.ಭದ್ರಪ್ಪ ಅವರು ನೂತನ ಅಧ್ಯಕ್ಷರಾಗಿರುವುದು ಸಂಘಕ್ಕೆ ಹೆಮ್ಮೆಯ ವಿಷಯ. ಸಾಮಾನ್ಯ ಮೀಸಲಾತಿ ಇದ್ದರೂ, ಪರಿಶಿಷ್ಟ ಜಾತಿಯ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ಈವರೆಗೆ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಹಾಗೂ ಅನುಭವಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರೂ ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎಂ.ಪರಮೇಶ್, ಸಂಘದ ನೂತನ ನಿರ್ದೇಶಕರಾದ ಎಚ್.ಆರ್.ಉಮೇಶ, ಎನ್.ಎಚ್.ಯೋಗೇಂದ್ರ, ಎಚ್.ಮಂಜಪ್ಪ, ಡಾಕಪ್ಪ, ಬಿ.ಸಿ.ನಿಜಲಿಂಗಪ್ಪ, ಲೀಲಾವತಿ, ಎಂ.ರತ್ನಮ್ಮ, ಎ.ಎಸ್.ವಿದ್ಯಾಧರ ಹಾಗೂ ಸಂಸ್ಥೆಯ ಸಿಇಓ ಆರ್.ಕುಮಾರ್ ಉಪಸ್ಥಿತರಿದ್ದರು.