ಹೊಸನಗರ ; ಹವಾಮಾನ ಆಧಾರಿತ ಬೆಳೆವಿಮೆ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ನೀಡಿರುವ ಹೇಳಿಕೆ ವಿರುದ್ಧ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ವಾಟಗೋಡು ಸುರೇಶ್ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಸತ್ಯಕ್ಕೆ ದೂರವಾಗಿದೆ. ಇದು ರೈತಾಪಿ ವರ್ಗವನ್ನು ದಾರಿ ತಪ್ಪಿಸುವ ಕುತಂತ್ರದಿಂದ ಕೂಡಿದೆ ಎಂದು ರಾಜ್ಯ ಎಂಸಿಎ ಮಾಜಿ ನಿರ್ದೇಶಕ ಹೆಚ್. ಆರ್. ತೀರ್ಥೇಶ್ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸಂಸದರನ್ನು ಗುರಿಯಾಗಿಸಿ, ಅನಗತ್ಯ ಹೇಳಿಕೆ ನೀಡುವುದನ್ನು ಬಿಟ್ಟು, ಈ ಬಾರಿಯ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಕನಿಷ್ಟ ಹಣ ಬಿಡುಗಡೆ ಆಗಿರುವುದನ್ನು ಕುರಿತಂತೆ ಅವರು ರಾಜ್ಯ ಸರ್ಕಾರ ಹಾಗು ಜಿಲ್ಲಾಡಳಿತ ವಿರುದ್ಧ ಮೊದಲು ಚಾಟಿ ಬೀಸಲಿ. ಆ ಮೂಲಕ ರೈತಾಪಿ ವರ್ಗಕ್ಕೆ ಸಹಕರಿಸಲಿ ಎಂಬ ಕಿವಿಮಾತು ಹೇಳಿದರು.

ಲೋಕಸಭಾ ಕ್ಷೇತ್ರಾಭಿವೃದ್ದಿ ವಿಷಯದಲ್ಲಿ ದೇಶದಲ್ಲೇ 2ನೇ ಸ್ಥಾನ ಹಾಗು ರಾಜ್ಯದಲ್ಲಿ ಮೊದಲ ಸ್ಥಾನ ನಮ್ಮ ಸಂಸದ ಬಿ.ವೈ. ರಾಘವೇಂದ್ರ ಅವರದ್ದು. ಪ್ರಧಾನಿ ಮೋದಿ ಅವರ ರೈತಪರ ಯೋಜನೆ ಹವಾಮಾನ ಆಧಾರಿತ ಬೆಳೆವಿಮೆ. ಇದರಲ್ಲಿ ಶೇ.12 ಕೇಂದ್ರ ಹಾಗು ಶೇ.5 ರೈತರು ಹಾಗು ಉಳಿಕೆ ಪ್ರೀಮಿಯಂ ಕಂತಿನ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಬಹಳಷ್ಟು ಮಳೆಮಾಪಕಗಳು ದುಸ್ತಿಯಲ್ಲಿವೆ. ಈ ಬಗ್ಗೆ ಈಗಾಗಲೇ ಸಂಸದರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೂ ಅಧಿಕಾರಿವರ್ಗ ಈ ಕುರಿತು ಜಾಗೃತಿ ವಹಿಸಿಲ್ಲ. ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ರಾಜ್ಯ ಸರ್ಕಾರ ಬೆಳೆವಿಮೆ ನೀಡುವ ಕೆಲವು ಮಾನದಂಡಗಳನ್ನು ರೈತಾಪಿವರ್ಗದ ಗಮನಕ್ಕೆ ಬಾರದೇ ಬದಲಾಯಿಸಿದೆ ಎಂಬ ಅನುಮಾನ ಕೇಳಿಬರುತ್ತಿದೆ. ಮಳೆ ಮಾಪನಗಳು ದುಸ್ತಿತಿಯಲ್ಲಿದ್ದು ನಿರ್ಧಿಷ್ಟ ಪ್ರಮಾಣದಲ್ಲಿ ಮಳೆ ದಾಖಲಾಗದೇ ಇರುವುದೇ ರೈತರಿಗೆ ಬೆಳೆವಿಮೆ ಕನಿಷ್ಟ ಪರಿಹಾರ ಜಮೆಯಾಗಲು ಕಾರಣ ಎಂದರು.
ಸಂಸದರ ವಿರುದ್ಧ ಅನಗತ್ಯ ಹೇಳಿಕೆ ನೀಡುವುದನ್ನು ವಾಟಗೋಡು ಸುರೇಶ್ ಮೊದಲು ನಿಲ್ಲಿಸಲಿ. ವಾಸ್ತವ ಸಂಗತಿ ಕುರಿತು ಗಮನ ಹರಿಸಲಿ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





