HOSANAGARA ; ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಕ್ರಾಂತಿಯೋಗಿ ಬಸವಣ್ಣ ಅವರನ್ನು ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ತೀವ್ರ ಖಂಡನೀಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ತಾಲೂಕು ಅಧ್ಯಕ್ಷ ಹೆಚ್.ಆರ್. ತೀರ್ಥೇಶ್ ತಿಳಿಸಿದ್ದಾರೆ.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ವರ್ಗದ ಮಠ, ಮಾನ್ಯಗಳಿಗೆ ಹಣಕಾಸಿನ ನೆರವು ನೀಡಿ ಜೀರ್ಣೋದ್ಧಾರ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಲ್ಲದೇ, ರಾಜ್ಯದಲ್ಲಿ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇದರಿಂದ ಹಿಂದುತ್ವ ಸಂಘಟನೆಗೆ ಆನೆ ಬಲ ದೊರೆತಿದೆ. ಇಡೀ ದೇಶದಲ್ಲಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಎಲ್ಲಾ ವರ್ಗದ ಜನರ ಶ್ರೇಯಸಿಗೆ ಬಿ.ಎಸ್.ವೈ ಶ್ರಮಿಸಿದ್ದಾರೆ. ಅಲ್ಲದೆ, ಶಾಸಕ ಯತ್ನಾಳ್ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದೆ ಬಿ.ಎಸ್.ಯಡಿಯೂರಪ್ಪ. ಅಂತವರ ಬಗ್ಗೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಯುವನಾಯಕ ಬಿ.ವೈ. ವಿಜಯೇಂದ್ರ ಹಾಗು ಅವರ ಕುಟುಂಬದ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಪ್ರತಿನಿತ್ಯ ಅವರ ವಿರುದ್ಧ ಹೇಳಿಕೆ ನೀಡುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಾದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಬಿ.ಪಿ.ಹರೀಶ್, ರಮೇಶ್ ಜಾರಕಿಹೊಳಿ, ಸಿದ್ದೇಶ್ವರ್, ಬಿ.ಪಿ.ಹರೀಶ್ ಇನ್ನಿತರರು ತಮಗೆ ರಾಜಕೀಯ ಅಸ್ತಿತ್ವ ಕಲ್ಪಿಸಿದ ಮಾಜಿ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಾಲಿಶ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದಿರುವ ತೀರ್ಥೇಶ್, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಇವರ ವಿರುದ್ಧ ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ವರೀಷ್ಟರನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಸಮರ್ಥವಾಗಿ ಪಕ್ಷ ಸಂಘಟನೆ ಮುಂದಾಗಿದ್ದಾರೆ. ವಿರೋಧಿಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.