ಶಿವಮೊಗ್ಗ:ಪುರದಾಳು ಗ್ರಾಮದ ರೈತರು ಕಾಡಾನೆ ಉಪಟಳದ ವಿರುದ್ಧ ಮಂಗಳವಾರ ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು. ಕಾಡಾನೆಗಳಿಂದ ಹಾನಿಗೊಳಗಾದ ಭತ್ತ, ಅಡಿಕೆ, ಬಾಳೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಬೆಳೆಗಳನ್ನು ಹೊತ್ತುಕೊಂಡು ಬಂದು ಶಿವಮೊಗ್ಗ ವನ್ಯಜೀವಿ ವಲಯದ ಉಪಸಂರಕ್ಷಣಾಧಿಕಾರಿ (DCF) ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಿದರು.
ಕಳೆದ ಹಲವು ತಿಂಗಳಿನಿಂದ ಪುರದಾಳು, ಮೇಲಿನ ಪುರದಾಳು, ಬೇಳೂರು, ಕೌಲಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಹೊಲಗಳಿಗೆ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿವೆ. ರೈತರ ನಾಟಿ ಭತ್ತ, ಬೆಳೆ ಬಂದು ನಿಂತ ಬಾಳೆ, ಜೋಳ, ಕಬ್ಬು, ಅಡಿಕೆ ಗಿಡಗಳನ್ನು ಹಾಳು ಮಾಡುತ್ತಿವೆ. ಕೆಲವು ದಿನಗಳಿಂದ ಗ್ರಾಮಗಳ ಒಳಗೂ ಆನೆಗಳು ನುಗ್ಗುತ್ತಿರುವುದರಿಂದ ಜನರು ಭೀತಿಯಲ್ಲಿ ದಿನಕಳೆಯುತ್ತಿದ್ದಾರೆ.
“ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ” ಎಂದು ರೈತರ ಆರೋಪ
“ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿಗಳಷ್ಟು ಬೆಳೆ ಹಾನಿ ನಮಗೆ ಆಗಿದೆ. ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಹೊಲಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ” ಎಂದು ರೈತರು ಆರೋಪಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ್ ಎಸ್. ಹೆಬ್ಬೂರು ಹೇಳಿದರು: “ನಾವು ಶರಾವತಿ ಮುಳುಗಡೆ ಸಂತ್ರಸ್ತರು. ಪುನರ್ವಸತಿ ಮಾಡಿಕೊಂಡು ಅಲ್ಪ ಭೂಮಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಬೆಳೆದು ಬಂದ ಬೆಳೆಗಳನ್ನು ಆನೆಗಳು ತಿಂದು ನಾಶ ಮಾಡುತ್ತಿವೆ. ಆದರೆ ಅರಣ್ಯ ಇಲಾಖೆ ನಾಮಕಾವಸ್ತೇ ಕ್ರಮ ಕೈಗೊಳ್ಳುತ್ತಿದೆ” ಎಂದರು.
ಶಾಸಕಿ ಶಾರದಾ ಪೂರ್ಯಾನಾಯ್ಕ್
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ರೈತರೊಂದಿಗೆ ಧ್ವನಿ ಸೇರಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳ ನೀತಿಯನ್ನು ಖಂಡಿಸಿದರು. ನಂತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ “ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ” ಎಂದು ಡಿಸಿಎಫ್ ಪ್ರಸನ್ನ ಪಟಗಾರ್ ಅವರಿಗೆ ಆಗ್ರಹಿಸಿದರು.
ಅಧಿಕಾರಿಗಳ ವಿವಾದಾತ್ಮಕ ಹೇಳಿಕೆ ವಿರುದ್ಧ ಆಕ್ರೋಶ
ಪ್ರತಿಭಟನೆ ವೇಳೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು “ಮುಳುಗಡೆ ರೈತರು ಕಾಡನ್ನು ಒತ್ತುವರಿಯಾಗಿ ಬಳಸಿಕೊಂಡಿದ್ದಾರೆ” ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರೈತರು ಗರಂ ಆಗಿ, “ಸರ್ಕಾರವೇ ನಮ್ಮನ್ನು ಕಾಡಿಗೆ ಬಿಟ್ಟಿದೆ. ನಾವು ಒತ್ತುವರಿದಾರರಲ್ಲ, ಸರಕಾರವೇ ಪುನರ್ವಸತಿ ಕಲ್ಪಿಸಿಲ್ಲ. ಈ ರೀತಿಯ ಹೇಳಿಕೆ ಅಸಮಂಜಸ” ಎಂದು ತರಾಟೆಗೆ ತೆಗೆದುಕೊಂಡರು.
ಅರಣ್ಯ ಇಲಾಖೆಯ ಭರವಸೆ
“ಪುರದಾಳು ಗ್ರಾಮ ವ್ಯಾಪ್ತಿಯಲ್ಲಿ 7–8 ಕಾಡಾನೆಗಳಿವೆ. ತಕ್ಷಣದ ಕ್ರಮವಾಗಿ ಇಪಿಟಿ ಟ್ರೆಂಚ್ ತೆಗೆಯಲಾಗುವುದು. ಸೋಲಾರ್ ತಂತಿ ಬೇಲಿ ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಂದ ತಕ್ಷಣ ಜಾರಿಗೊಳಿಸಲಾಗುವುದು” ಎಂದು ಉಪಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್ ಪಟಗಾರ್ ಹೇಳಿದರು.
ರೈತರ ಬೇಡಿಕೆ
ರೈತರು “ಇಪಿಟಿ ಟ್ರೆಂಚ್, ಸೋಲಾರ್ ತಂತಿ ಬೇಲಿ ಹಾಗೂ ಆನೆಗಳನ್ನು ಓಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪುರದಾಳು ಗ್ರಾಮಪಂಚಾಯತ್ ಉಪಾಧ್ಯಕ್ಷೆ ಕುಸುಮಾ ಜಗದೀಶ್, ಸದಸ್ಯರಾದ ಪ್ರದೀಪ್ ಎಸ್. ಹೆಬ್ಬೂರು, ಮಾನಸ ಹೆಬ್ಬೂರು, ಹಾಗೂ ನೂರಾರು ರೈತರು ಭಾಗವಹಿಸಿದ್ದರು.
ವಿಪರೀತ ಸೊಳ್ಳೆ ಕಾಟ ; ತೆಂಗಿನಕಾಯಿ ಸಿಪ್ಪೆ ತೆರವಿಗೆ ಆಗ್ರಹ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650