ಘೋಷಿತ ಗ್ಯಾರಂಟಿ ಯೋಜನೆ, ಸಮರ್ಪಕ ಅನುಷ್ಟಾನ ಕಾಂಗ್ರೆಸ್‌ಗೆ ಲಾಭ ; ಚಿದಂಬರ

0 207

ರಿಪ್ಪನ್‌ಪೇಟೆ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ನಂತರ ತಕ್ಷಣವೇ ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ ತಂದಿದೆ ಎಂದು ಹೊಸನಗರ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಚಿದಂಬರ ಹೇಳಿದರು.

ರಿಪ್ಪನ್‌ಪೇಟೆಯ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲ್ಲೂಕಿನಲ್ಲಿ ಶೇ. 95 ರಷ್ಟು ಫಲಾನುಭವಿಗಳು ಈ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದು ದಾಖಲಾತಿ ನ್ಯೂನತೆಗಳಿಂದ ಶೇ.5 ರಷ್ಟು ಮಂದಿ ಫಲಾನುಭವಿಗಳು ಈ ಯೋಜನೆಯಿಂದ ವಂಚನೆಗೊಳಗಾಗಿದ್ದು ಈಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಿರುವುದರಿಂದ ಈ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಯೋಜನಾ ಅನುಷ್ಟಾನಗೊಳಿಸಲಾಗುವುದೆಂದು ಹೇಳಿದರು.

ಬಿಜೆಪಿಯವರ ಪಾಲೇ ಹೆಚ್ಚು
ರಾಜ್ಯ ಸರ್ಕರ ಘೋಷಣೆ ಮಾಡಿರುವ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಶೇ. 75 ರಷ್ಟು ಮಂದಿ ಬಿಜೆಪಿಯವರೇ ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಉಂಡ ಮನೆಗೆ ದ್ರೋಹ ಬಗೆದಂತೆ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ
ಈ ಬಾರಿ ಲೋಕಸಭಾ ಚುನಾವಣೆ ನಂತರದಲ್ಲಿ ಕೇಂದ್ರದಲ್ಲಿಯೂ ಸಹ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಅಲ್ಲಿಯೂ ಸಹ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಅಧಿಕಾರ ಹಿಡಿದ ತಕ್ಷಣವೇ ಜಾರಿಗೆ ತರಲಿದೆ ಎಂಬ ಭರವಸೆ ವ್ಯಕ್ತಪಡಿಸಿ, ಕೇಂದ್ರದ ಬಿಜೆಪಿ ಕಳೆದ 10 ವರ್ಷದಿಂದ ಸುಳ್ಳಿನ ಸೌಧದಲ್ಲಿ ಅಧಿಕಾರದ ಚುಕ್ಕಾಣಿ ನಡೆಸಿದೆ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಅಮೀರ್ ಹಂಜಾ, ಬ್ಲಾಕ್ ಸಮಿತಿ ಅಧ್ಯಕ್ಷ ಗಣಪತಿ ಗವಟೂರು, ತಾಲ್ಲೂಕು ಸಮಿತಿ ಸದಸ್ಯರಾದ ಕೆರೆಹಳ್ಳಿ ರವೀಂದ್ರ, ರಮೇಶ್ ಫ್ಯಾನ್ಸಿ, ಚಿಕ್ಕಜೇನಿ ಕರುಣಾಕರ್, ಪ್ರಕಾಶ ಪಾಲೇಕರ್, ಶ್ರೀಧರ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!