ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಆನೆಗಳ ಹಿಂಡು !

0 315

ಚಿಕ್ಕಮಗಳೂರು: ಆಲ್ದೂರು ಅರಣ್ಯ (Forest) ವಲಯದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ (Elephants) ಹಿಂಡು ಗುರುವಾರ ಬೆಳಗ್ಗೆ ನಗರ ಸಮೀಪದ ನೆಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಜನತೆ ಭಯಭೀತರಾಗಿದ್ದಾರೆ.

ನಗರದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ನೆಲ್ಲೂರಿನ ಕಬ್ಬಿನ ಗದ್ದೆಯಲ್ಲಿ ಆನೆಗಳು ಬೀಡುಬಿಟ್ಟಿರುವುದು ತಿಳಿದ ಕೂಡಲೇ ನೂರಾರು ಗ್ರಾಮಸ್ಥರು ಸೇರಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಇಂದು ನಡೆಯಿತು.

ವಿಷಯ ತಿಳಿಯುತ್ತಿದ್ದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಬಾಬು ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ವಿಕ್ರಮ ಆಮಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಶೀಘ್ರ ಕಾಡಾನೆಯ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ನೆಲ್ಲೂರು ಸೇರಿದಂತೆ ಸುತ್ತಲಿನ ಶಾಲೆಗಳಿಗೆ ಬೆಳಗ್ಗೆಯೇ ರಜೆ ಘೋಷಿಸಲಾಯಿತು. ಸ್ವಲ್ಪ ಸಮಯದಲ್ಲೇ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಆರಂಭವಾಯಿತು. ಸುಮಾರು ಒಂದು ಗಂಟೆ ನಂತರ ಆನೆಗಳ ಹಿಂಡು ನಿಧಾನವಾಗಿ ಕಬ್ಬಿನ ಗದ್ದೆಯಿಂದ ಸರಿದು ಗುಡ್ಡದ ತಪ್ಪಲಿನ ಅರಣ್ಯದ ಕಡೆಗೆ ಚಲಿಸಲಾರಂಭಿಸಿದವು.

ಕತ್ತಿಗೆ ರೇಡಿಯೋ ಕಾಲರ್ ಧರಿಸಿರುವ ಭುವನೇಶ್ವರಿ ಆನೆಯು ತಂಡದಲ್ಲಿದೆ. ಈ ಆನೆಗೆ ಅರಣ್ಯ ಇಲಾಖೆಯೇ ಹಿಂದೆ ರೇಡಿಯೋ ಕಾಲರ್ ಅಳವಡಿಸಿ ಭುವನೇಶ್ವರಿ ಎಂದು ಹೆಸರಿಟ್ಟಿದೆ.

ಹಾಸನ ಜಿಲ್ಲೆ ಸಕಲೇಶಪುರ-ಆಲೂರು ಮಾರ್ಗವಾಗಿ ಮೂಡಿಗೆರೆಯಿಂದ ಆಲ್ದೂರು ಅರಣ್ಯವಲಯಕ್ಕೆ ಬಂದಿರುವ ನಾಲ್ಕೈದು ಆನೆಗಳ ಹಿಂಡನ್ನು ಭುವನೇಶ್ವರಿ ಆನೆಯೂ ಸೇರಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಸುಮಾರು 01 ತಿಂಗಳಿಗಿಂತಲೂ ಹಿಂದಿನಿಂದ ಈ ಆನೆಗಳ ಹಿಂಡು ಮೂಡಿಗೆರೆ, ಆಲ್ದೂರು ವಲಯದಲ್ಲಿ ಬೀಡುಬಿಟ್ಟಿದ್ದು, ಇದೀಗ ಚಿಕ್ಕಮಗಳೂರು ನಗರದಂಚಿನ ಗ್ರಾಮಗಳಿಗೆ ಲಗ್ಗೆ ಇಡಲಾರಂಭಿಸಿವೆ.

ನವೆಂಬರ್ 08 ರಂದು ಆಲ್ದೂರು ಸಮೀಪ ಹೆಡದಾಳು ಗ್ರಾಮದಲ್ಲಿ ಮೀನಾ ಎಂಬ ಕಾರ್ಮಿಕ ಮಹಿಳೆಯನ್ನು ಒಂಟಿ ಸಲಗವೊಂದು ಬಲಿ ಪಡೆದ ನಂತರ 9 ಸಾಕಾನೆಗಳ ನೆರವಿನಲ್ಲಿ ಆನೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ನರಹಂತಕ ಅನೆ ಸೆರೆಗೆ ಮಾತ್ರ ಒತ್ತು ನೀಡುತ್ತಿದ್ದು, ಉಳಿದ ಆರು ಆನೆಗಳ ಹಿಂಡನ್ನು ಕಾಡಿಗೆ ಹಿಮ್ಮೆಟ್ಟಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಆನೆ ಕಾರ್ಯಾಚರಣೆ ಹೆಸರಲ್ಲಿ ಅರಣ್ಯ ಸಿಬ್ಬಂದಿ ಮೋಜು ಮಾಡುತ್ತಿದ್ದಾರೆ. ಆಗೊಮ್ಮೆ, ಈಗೊಮ್ಮೆ ಪಟಾಕಿಗಳನ್ನು ಸಿಡಿಸಿ ವಾಪಾಸಾಗುತ್ತಿದ್ದಾರೆ. ಈ ಆನೆಗಳ ಹಿಂಡು ಪ್ರತಿದಿನ ಲಕ್ಷಾಂತರ ರೂ. ಬೆಲೆಯ ಬೆಳೆಯನ್ನು ಹಾನಿ ಪಡಿಸುತ್ತಿವೆ. ಭತ್ತ, ಕಬ್ಬು, ಬಾಳೆ, ಅಡಿಕೆ, ಕಾಫಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳು ಹಾನಿಗೀಡಾಗುತ್ತಿದೆ. ಒಂದಷ್ಟನ್ನು ಆನೆಗಳು ತಿಂದುಹಾಕುತ್ತಿದ್ದರೆ, ಅದಕ್ಕಿಂತಲೂ ಹೆಚ್ಚಿನ ಬೆಳೆಗಳು ಆನೆಗಳ ತುಳಿತದಿಂದ ಹಾನಿಗೀಡಾಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಆನೆದಾಳಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಮನೆಗಳಿಂದ ಹೊರ ಬರಲು ಆಗುತ್ತಿಲ್ಲ. ನಮ್ಮ ಗೋಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿನ್ನೆಯಷ್ಟೇ ನೆಲ್ಲೂರು ಪಕ್ಕದ ಮತ್ತಾವರ ಗ್ರಾಮದ ಸುತ್ತಮುತ್ತ ದಾಳಿ ಮಾಡಿದ ಇದೇ ಆನೆಗಳ ಹಿಂಡು ಭಾರೀ ಪ್ರಮಾಣದ ಬೆಳೆ ಹಾನಿಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಗ್ರಾಮದ ಗೌರಿಕೆರೆ ಬಳಿ ದಿಢೀರ್ ಪ್ರತಿಭಟನೆ ನಡೆಸಿ ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಹಿಮ್ಮೆಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ನಗರ ಸಮೀಪ ನಲ್ಲೂರಿನಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು, ರೈತರು, ಕೂಲಿ ಕಾರ್ಮಿಕರು ಭಯಭೀತರಾಗಿದ್ದು, ಕೂಡಲೇ ಉನ್ನತ ಅಧಿಕಾರಿಯನ್ನು ನೇಮಿಸಿ ಹಾಗೂ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನದ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಹೆಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.

ಶಾಸಕರ ಈ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಪಿಸಿಸಿಎಫ್ ಹಾಗೂ ಉನ್ನತ ಅಧಿಕಾರಿಗಳಿಗೆ ಕೂಡಲೇ ಕಟ್ಟುನಿಟ್ಟಿನ ಕ್ರಮ ವಹಿಸಿ, ಜನಜೀವನಕ್ಕೆ ಅನುಕೂಲ ಮಾಡುವಂತೆ ದೂರವಾಣಿ ಮೂಲಕ ಸೂಚಿಸಿದ್ದಾರೆ.

Leave A Reply

Your email address will not be published.

error: Content is protected !!