ಮಹಾಮಳೆಗೆ ಜನಜೀವನ ಅಸ್ತವ್ಯಸ್ತ | ಹಲವಡೆ ಜಮೀನುಗಳು ಜಲಾವೃತ, ಕುಸಿದು ಬಿದ್ದ ಮದರಸ ಕಟ್ಟಡ | ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸಂಚಾರ ಆಸ್ತವ್ಯಸ್ತ

0 68

ರಿಪ್ಪನ್‌ಪೇಟೆ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಚಿಕ್ಕಪುಷ್ಯ ಮಳೆಯಿಂದಾಗಿ ಹಲುಸಾಲೆ ಮಳವಳ್ಳಿ ಗ್ರಾಮದ ನಾಗರಾಜ ಎಂಬುವವರ ಜಮೀನಿಗೆ ನೀರು ನುಗ್ಗಿ ಜಮೀನು ಜಲಾವೃತಗೊಂಡಿದ್ದು, ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಸರೂರು ಮುರುಗೇಶಪ್ಪಗೌಡರ ಅಡಿಕೆ ತೋಟಕ್ಕೆ ಗುಡ್ಡದ ನೀರು ಹರಿದು ಸಂಪೂರ್ಣ ಜಲಾವೃತವಾಗಿದೆ.

ಭಾರಿ ಮಳೆಯಿಂದಾಗಿ ಕೆಂಚನಾಲ ಗ್ರಾ.ಪಂ. ವ್ಯಾಪ್ತಿಯ ಗಾಳಿಬೈಲು ಗ್ರಾಮದ ಮದರಸ ಶಾಲೆ ಮೇಲ್ಛಾವಣಿ ಕುಸಿದು ಬಿದ್ದಿರುವುದು.

ಹೀಗೆ ಭಾನುವಾರ ರಾತ್ರಿ 9ನೇ ಮೈಲಿಕಲ್ಲು ಬಳಿಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಶಿವಮೊಗ್ಗ- ಹೊಸನಗರ-ರಿಪ್ಪನ್‌ಪೇಟೆ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.
ಇನ್ನೂ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದ ಮದರಸ ಸ್ಕೂಲ್ ಕಟ್ಟಡ ಕುಸಿದು ಬಿದ್ದಿದೆ. ಹಾಗೆಯೇ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಲೆ ಗ್ರಾಮದ ಈಶ್ವರಪ್ಪ ಎಂಬುವರ ಮನೆಯ ಗೋಡೆ ಕುಸಿದಿದೆ.

ಭಾನುವಾರ ಹೊಸನಗರ ಶಿವಪ್ಪನಾಯಕ ರಸ್ತೆಯ ಸತೀಶ ಎಂಬುವವರ ಮನೆಯ ಗೋಡೆ ಕುಸಿತವಾಗಿದ್ದು ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದೇ ರೀತಿ ಹೊಸನಗರ ತಾಲ್ಲೂಕಿನ ತಳಲೆ ಗ್ರಾಮದ ಚನ್ನಬಸಪ್ಪ ಬಿನ್ ಮಂಜಪ್ಪ ರವರ ಕೊಟ್ಟಿಗೆ, ಮೂಡುಗೊಪ್ಪ ಗ್ರಾಮದ ಚಂದ್ರಶೇಖರ ಬಿನ್ ತಿಮ್ಮದಾಸಯ್ಯರವರ ವಾಸದ ಮನೆ ಭಾಗಶಃ ಹಾನಿಯಾದ ಬಗ್ಗೆ ಘಟನೆ ವರದಿಯಾಗಿದೆ.

ಶುಕ್ರವಾರ ರಾತ್ರಿಯಿಂದ ಹಿಡಿದಿರುವ ಮಳೆ ಶನಿವಾರ ಭಾನುವಾರ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿದ್ದು ಸುತ್ತಮುತ್ತಲಿನ ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದ್ದು ಇಂದು ಸಹ ಮಳೆಯ ಆರ್ಭಟ ಕಡಿಮೆಯಾಗದೇ ನಿರಂತರವಾಗಿ ಸುರಿಯುತ್ತಿದೆ. ಇದರಿಂದಾಗಿ ಗವಟೂರು ಬಳಿಯ ಶರ್ಮಿಣ್ಯಾವತಿ, ಸೂಡೂರು, ಹೆದ್ದಾರಿಪುರ, ಕಲ್ಲೂರು ಬಳಿಯ ಕುಮುದ್ವತಿ, ಹಳ್ಳೂರು ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು ಕೆರೆ-ಕಟ್ಟೆಗಳು ತುಂಬಿಕೊಳ್ಳುತ್ತಿವೆ. ಮಳೆ ಹೀಗೆ ಮುಂದುವರಿದರೆ ಬೆಟ್ಟನಕೆರೆ, ತಾವರೆಕೆರೆ, ತಟ್ಟೆಕೆರೆಗಳು, ಬರುವೆ ಕೆರೆಗಳ ಕೋಡಿ ಬೀಳುವುದು. ಈಗಾಗಲೇ ರೈತರು ನಾಟಿಗೆ ಸಿದ್ದಪಡಿಸಿದ ಸಸಿಮಡಿಯಿಂದ ಸಸಿ ಕಿತ್ತು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.


ಹೊಸನಗರ ತಾಲ್ಲೂಕಿನ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೊಸನಗರ ತಹಶೀಲ್ದಾರ್ ಧಮಾಂತ ಗಂಗಾಧರ್ ಕೋರಿಯವರು ಹೊಸನಗರದಲ್ಲಿ ವಾಸವಾಗಿದ್ದು ಕಂದಾಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಗ್ರಾಮ-ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಯಾವುದೇ ಗ್ರಾಮದಲ್ಲಿ ಆನಾಹುತವಾದರೆ ಸಾರ್ವಜನಿಕರಿಗೆ ತೊಂದರೆಯಾದರೆ ತಕ್ಷಣ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಬೇಕೆಂದು ಕೇಳಿಕೊಂಡಿದ್ದಾರೆ.

ಭಾರಿ ಮಳೆಯಿಂದಾಗಿ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಲೆ ಗ್ರಾಮದ ಈಶ್ವರಪ್ಪನವರ ವಾಸದ ಮನೆಯ ಗೋಡೆ ಕುಸಿದಿರುವುದು.

ಲೋಕೋಪಯೋಗಿ ಇಲಾಖೆಯವರು ಮತ್ತು ಗ್ರಾಮಾಡಳಿತದವರು ರಸ್ತೆಯ ಪಕ್ಕದ ಚರಂಡಿಯನ್ನು ಸ್ವಚ್ಚಗೊಳಿಸದೇ ಇರುವುದರಿಂದಾಗಿ ಇಲ್ಲಿನ ಸಾಗರ ಮುಖ್ಯ ರಸ್ತೆಯಲ್ಲಿನ ಅಂಚೆ ಕಛೇರಿ ಬಳಿ ರಸ್ತೆಯ ತುಂಬೆಲ್ಲಾ ಹೊಂಡ-ಗುಂಡಿ ಬಿದ್ದು ಸಾರ್ವಜನಿಕರು ಕೊಚ್ಚೆ ನೀರಿನ ಅಭಿಷೇಕ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ.

ಇನ್ನೂ ಭಾರಿ ಮಳೆಯಿಂದಾಗಿ ಮಂಗಳವಾರವೂ ಸಹ ಹೊಸನಗರ ತಾಲೂಕಿನ ನಿಟ್ಟೂರು ಕ್ಲಸ್ಟರ್ ಮತ್ತು ನಗರ ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Leave A Reply

Your email address will not be published.

error: Content is protected !!