ಯುವ ಜನಾಂಗದಲ್ಲಿ ಧರ್ಮ ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಲಿ ; ರಂಭಾಪುರಿ ಶ್ರೀಗಳು

0 201

ಎನ್.ಆರ್.ಪುರ : ಬೆಳೆಯುತ್ತಿರುವ ಯುವ ಜನಾಂಗ ಈ ದೇಶದ ಅಮೂಲ್ಯ ಆಸ್ತಿ. ಅವರಿಗೆ ಯೋಗ್ಯ ಸಂಸ್ಕಾರ ಮತ್ತು ಆದರ್ಶಗಳನ್ನು ಕಲಿಸಿಕೊಡುವ ಅಗತ್ಯವಿದೆ. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶನಿವಾರ ಜರುಗಿದ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಮನುಷ್ಯ ದೊಡ್ಡವನೆಂದೆನಿಸಿಕೊಳ್ಳಲಾರ. ದೊಡ್ಡ ಮನಸ್ಸು ಗುಣಗಳಿಂದ ದೊಡ್ಡವರಾಗಲು ಸಾಧ್ಯವಿದೆ. ದೇಶ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಯುವ ಜನಾಂಗ ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸೂಕ್ತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಅದ್ಭುತ ಸಾಧನೆ ಮಾಡಲು ಸಾಧ್ಯ. ಬದುಕಿನ ಯಾವ ದಿನವೂ ವ್ಯರ್ಥವಲ್ಲ. ಒಳ್ಳೆಯ ದಿನಗಳಿಂದ ಸಂತೋಷ ಸಿಗುತ್ತದೆ. ಕೆಟ್ಟ ದಿನಗಳಿಂದ ಅನುಭವ ಸಿಗುತ್ತದೆ. ವಿದ್ಯೆ ಕಲಿತ ನಂತರ ಗುರು ಸಂಪತ್ತು ಬಂದಾಗ ಸ್ಮೇಹ ಹೆಂಡತಿ ಬಂದಾಗ ಹೆತ್ತವರನ್ನು ಎಂದಿಗೂ ಮರೆಯಬಾರದು. ಸಮಾಜದಲ್ಲಿ ಗೌರವ ಘನತೆ ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು. ಕಾಲಿಗೆ ಆದ ಗಾಯ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ಶ್ವಾಸ ಇದ್ದರೆ ಬದುಕು. ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯುತ್ತದೆ. ವಿಶ್ವಾಸವಿದ್ದರೆ ಸಂಬಂಧ. ಇಲ್ಲದಿದ್ದರೆ ಸಂಬಂಧಗಳು ನಾಶಗೊಳ್ಳುತ್ತವೆ. ಆದ್ದರಿಂದ ಯುವ ಜನಾಂಗ ಜಾಗೃತಗೊಂಡು ಧರ್ಮ ಸಂಸ್ಕೃತಿ ಪರಂಪರೆ ದೇಶಭಕ್ತಿ ಮೈಗೂಡಿಸಿಕೊಂಡು ಬಾಳಬೇಕೆಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಯೋತ್ಪಾದನೆ ನಿಗ್ರಹ ಸಾಧ್ಯವಾಗುತ್ತಿಲ್ಲ. ಮನಃ ಪರಿವರ್ತನೆಯಿಂದ ಮಾತ್ರ ಸಾಧ್ಯ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆದಿರುವುದು ದುರ್ದೈವ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಇಂದಿಗೂ ಪ್ರಸ್ತುತವಾಗಿದೆ. ಅವರು ಸಿದ್ದಾಂತ ಶಿಖಾಮಣಿ ಮೂಲಕ ಅಮೂಲ್ಯ ಸಂದೇಶ ನೀಡಿದ್ದಾರೆ. ಸಮಾಜದಲ್ಲಿ ಶ್ರದ್ಧೆ ಶಾಂತಿ ಇದೆ ಸಮಾನತೆ ಇದೆ. ವೀರಶೈವರೆಂದರೆ ಭಕ್ತಿಯಲ್ಲಿಯೂ ವೀರರು. ಬದುಕಿನಲ್ಲಿಯೂ ವೀರರು. ಸರಳ ಬದುಕನ್ನು ನಾವಿಂದು ಕ್ಲಿಷ್ಟ ಮಾಡಿಕೊಂಡಿದ್ದೇವೆ. ಜೀವನದಲ್ಲಿ ಮುಗ್ಧತೆಯನ್ನು ಕಾಪಾಡಿಕೊಂಡು ಬರುವುದು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದ ಬಲು ಕಷ್ಟದ ಕೆಲಸ. ತಮ್ಮ ಅಧಿಕಾರಾವಧಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರದಿಂದ ನಡೆಸುವಂತೆ ಆದೇಶ ಮಾಡಿದ್ದನ್ನು ನೆನಪಿಸಿಕೊಂಡರು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಧಾರ್ಮಿಕ ಚಿಂತನಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣವೆಂದರು.

ಧರ್ಮ ಸಮಾರಂಭದಲ್ಲಿ ಪಾಲ್ಗೊಂಡ ಮೈಸೂರು ವಿಜಯವಾಣಿಯ ಎ.ಆರ್.ರಘುರಾಮ ಮಾತನಾಡಿ, ಬೆಳಕಿಗೆ ಮಹತ್ವ ಬಂದಿದ್ದೆ ಕತ್ತಲೆಯಿಂದ. ಸುಖಕ್ಕೊಂದು ಅರ್ಥ ಬರುವುದೇ ಕಷ್ಟದಿಂದ ಎಂಬುದನ್ನು ಮರೆಯಬಾರದು. ಧರ್ಮ ಪೀಠದ ನಿರಂತರವಾದ ಪರಿಶ್ರಮ ಮತ್ತು ಬೋಧನೆಯಿಂದಾಗಿ ನಮ್ಮೆಲ್ಲರ ಬಾಳು ಸುಖಮಯವಾಗಿ ಸಾಗುತ್ತಲಿದೆ. ಹೊರಗೆ ಬಡವನವಿದ್ದು ಒಳಗೆ ಸಿರಿತನ ಇದ್ದರೆ ಬದುಕು ಸಾಗೀತು. ಹೊರಗೆ ಸಿರಿತನವಿದ್ದು ಒಳಗೆ ಬಡತನವಿದ್ದರೆ ಬಾಳುವುದು ಬಲು ಕಷ್ಟ ಎಂದರು.

ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾಗರೀಕ ಸಮಾಜದಲ್ಲಿ ಕೆಲವು ಅನಾಗರಿಕ ವರ್ತನೆಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಬೆಳೆಯುವ ಜನಾಂಗದಲ್ಲಿ ಸಂಸ್ಕಾರ ಸಂಸ್ಕೃತಿ ದೇಶ ಧರ್ಮ ಇವುಗಳ ಬಗ್ಗೆ ಸ್ವಾಭಿಮಾನ ಬೆಳೆದುಕೊಂಡು ಬರುವ ಅವಶ್ಯಕತೆ ಇದೆಯೆಂದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿದರು.
ದುಗ್ಲಿ-ಕಡೇನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಹುಬ್ಬಳ್ಳಿಯ ಬಸಯ್ಯ ಕಾಡಯ್ಯ ಹಿರೇಮಠ, ಸಿದ್ಧಾಪುರದ ಬಸನಗೌಡ ಮಾಲಿ ಪಾಟೀಲ, ಬೆಂಗಳೂರಿನ ಬಾಳಯ್ಯ ಇಂಡಿಮಠ ಇವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಚಿಕ್ಕಮಗಳೂರಿನ ಡಾ|| ಕೆ.ಆರ್.ಭೂಮಿಕಾ ಭರತ ನಾಟ್ಯ ಪ್ರದರ್ಶಿಸಿದರು. ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್ ಸ್ವಾಗತಿಸಿದರು. ಚಿಕ್ಕಮಗಳೂರಿನ ಪಾರ್ವತಿ ಮಹಿಳಾ ಬಳಗದವರಿಂದ ಸಂಗೀತ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

Leave A Reply

Your email address will not be published.

error: Content is protected !!