ಬಿಜೆಪಿ ನಾಯಕರದ್ದು ಭೂ ಮಾಲಿಕ ಪಕ್ಷ ; ಕಿಮ್ಮನೆ ರತ್ನಾಕರ್

0 335

ಹೊಸನಗರ : ಬಿಜೆಪಿ ನಾಯಕರು ಭೂ ಮಾಲಿಕ ಪಕ್ಷದವರು. ಹಿಂದಿನಿಂದಲೂ ಅವರು ಗೇಣಿದಾರರ ಪರ ಇರಲಿಲ್ಲ. ಅದೇ ರೀತಿ, ಶೋಷಿತರ ಪರ ಬಿಜೆಪಿ ಧ್ವನಿ ಆಗಿರಲಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬಾರು ಹಾಗೂ ಎಂ. ಗುಡ್ಡೆಕೊಪ್ಪ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷದ ನಾಯಕರು ಅಪ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ, ಬಡವರನ್ನು ಮುಖ್ಯ ವಾಹಿನಿಗೆ ಬಾರದಂತೆ ತಡೆಯುವುದು ಅವರ ಉದ್ದೇಶ ಎಂದರು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರೈತರ ನಾಡಿ ಮಿಡಿತಕ್ಕೆ ಹತ್ತಿರವಿದ್ದರು. ರೈತರ ಹಿತ ಕಾಯಲು ಬದ್ದರಾಗಿದ್ದರು. ಅದೇ ದಾರಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಬೆಂಬಲಿಸಬೇಕಿದೆ ಎಂದರು.

ಕಾಂಗ್ರೆಸ್ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಣ್ಣು ಮಕ್ಕಳ ಕಣ್ಣೀರು ಒರೆಸಲು ದಾರಿ ದೀಪವಾಗಿವೆ. ರೈತರು ಬೆಳೆದ ಬೆಳೆಗೆ ಬೆಂಬಲ ಸಿಗದೆ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದ್ದರಿಂದ ಅನೇಕ ಆತ್ಮಹತ್ಯೆಯಂತಹ ಪ್ರಕರಣ ಹೆಚ್ಚುತ್ತಿವೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಬಡವರ ಬದುಕಿಗೆ ದಾರಿ ದೀಪವಾಗಿದ್ದರು. ಅದೇ ಹಾದಿಯಲ್ಲಿ ನಾನೂ ಕೂಡ ಸಾಗುತ್ತೇನೆ ಎಂದರು.
ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬಿಜೆಪಿ ಸಂಸದ ರಾಘವೇಂದ್ರ ಅವರನ್ನು ಗೆಲ್ಲಿಸಿ ದಶಕಗಳ ಕಾಲ ಅಧಿಕಾರ ನೀಡಿದ್ದೇವೆ. ಇಲ್ಲಿಯವರೆಗೆ ಗ್ರಾಮೀಣ ಪ್ರದೇಶಗಳಿಗೆ ಅವರ ಕೊಡುಗೆ ಏನು? ಇಲ್ಲಿ ಸಂಸದ ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳು ಸ್ವಹಿತಕ್ಕೆ ಮಾತ್ರ ಸೀಮಿತ ಆಗಿವೆ. ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಜನ ಸಾಮಾನ್ಯರು ಚುನಾವಣೆಯಲ್ಲಿ ನೀಡಿದ ಮತದಿಂದ ದೇಶದ ಭವಿಷ್ಯ ಬದಲಾಗಲಿದೆ. ಆದರೆ, ಇಲ್ಲಿ ತಾಳ್ಮೆಯಿಂದ ಯೋಚಿಸಿ ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಕೇವಲ ಪ್ರಧಾನಿ ಮೋದಿ ಅವರ ಜಪ ಮಾತ್ರ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಆಡಳಿತದಿಂದ ದೇಶದ ಅನೇಕ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಇದರಿಂದ, ಸಹಸ್ರಾರು ಬಡ ಕುಟುಂಬಗಳು ಬೀದಿಗೆ ಬಂದಿವೆ. ರಾಜ್ಯದಲ್ಲಿ ಹಸಿದ ಹೊಟ್ಟೆಗಳು ಉಪವಾಸದಿಂದ ಕೂರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಗ್ಯಾರಂಟಿ ಯೋಜನೆಗಳು ಅಶಕ್ತ ಕುಟುಂಬಗಳಿಗೆ ಆಸರೆ ಆಗಿವೆ ಎಂದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜ್‌ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶ್ವೇತಾ ಬಂಡಿ, ಅನಿತಾ ಕುಮಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು‌.

ದೇಶದಲ್ಲಿ ಜಾತಿ- ಧರ್ಮದ ರಾಜಕಾರಣಕ್ಕೆ ತಡೆ ಹಿಡಿಯಬೇಕು. ಎಲ್ಲಾ ಧರ್ಮ, ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯವನ್ನು ವಿಭಾಗ ಮಾಡಲು ಬಿಜೆಪಿ ನಾಯಕರು ಸಂಚು ಹೂಡುತ್ತಿದ್ದಾರೆ. ಇದು ಆಗ ಕೂಡದು ಎಂದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಬೇಕು.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ

Leave A Reply

Your email address will not be published.

error: Content is protected !!