ಹೊಸನಗರ ; ಸರ್ಕಾರ ”ಗಿಡ ನೆಡಿ-ಪರಿಸರ ಉಳಿಸಿ”, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ. ರಸ್ತೆಯ ಪಕ್ಕದಲ್ಲಿ ಆರೋಗ್ಯಕರವಾಗಿ ಬೆಳೆದು ನಿಂತಿದ್ದ ನೆರಳಿನ ಮರಗಳು ಗರಗಸಕ್ಕೆ ಆಹುತಿಯಾಗಿ ಧರೆಗುರುಳಿದ್ದು ಪರಿಸರ ಪ್ರೇಮಿಗಳಿಗೆ ಕಣ್ಣೀರು ತರಿಸುವ ಕ್ಷಣಕ್ಕೆ ಸಾಕ್ಷಿಯಾಗಿದೆ. ಸಾಲು ಸಾಲು ಮರಗಳು ಹೀಗೆ ಧರೆಗುರುಳಿದರೆ ನೆರಳಿಗೆ ಆಸರೆ ಹೇಗೆ? ಇದನ್ನು ಕಡಿತಲೆ ಮಾಡುವವರು ಮತ್ತು ಮಾಡಿಸುವವರು ಯೋಚಿಸಬೇಕಾಗಿದೆ.
ಇದೆಲ್ಲದರ ನಡುವೆ ನೂರಾರು ವಾಹನಗಳಿಗೆ ನೆರಳಾಗಿ, ಊರಿನ ಅಂದ ಹೆಚ್ಚಿಸುತ್ತಿದ್ದ ಸಾಲು ಮರಗಳ ಕಡಿತಲೆ ಚೌಡಮ್ಮ ರಸ್ತೆ ಹಾಗೂ ಬಸ್ ನಿಲ್ದಾಣದ ಸುತ್ತ ನಿರಂತರವಾಗಿ ಸಾಗಿದೆ. ತಮ್ಮ ಅಂಗಡಿ ಫಲಕ ಕಾಣುವುದಿಲ್ಲ ಎಂಬ ನೆಪದಲ್ಲಿ ಯಾವುದೇ ಇಲಾಖೆಯ ಅನುಮತಿ ಇಲ್ಲದೆ ರಾತ್ರೋರಾತ್ರಿ ಮರಗಳನ್ನು ಸಂಪೂರ್ಣ ಬೋಳಿಸುತ್ತಾರೆ. ಹೀಗೆ ಬೋಳಿಸಿದ ಅನೇಕ ಮರಗಳು ಮತ್ತೆ ಚಿಗುರುವ ಮೊದಲೆ ಸಾಯುತ್ತಿವೆ.
ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಪೂಜಾರಿ ಅವರ ಅವಿರತ ಶ್ರಮದಿಂದ ಊರಿನಲ್ಲಿ ಅನೇಕ ರಸ್ತೆಗಳಲ್ಲಿ ಸಾಲು ಮರಗಳು ಕಂಗೊಳಿಸುತ್ತಿವೆ. ಆದರೆ ಇವುಗಳ ರಕ್ಷಣೆ ಮಾಡಬೇಕಾದ ಪಟ್ಟಣ ಪಂಚಾಯತಿ ಮರಗಳ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಜೊತೆಗೆ ವಿಪರ್ಯಾಸವೆಂದರೆ ರಾತ್ರಿ ವೇಳೆ ಈ ಮರಗಳನ್ನು ಕಡಿದು ಸಾಗಿಸಲು ಪುರಸಭೆ ನೌಕರರೇ ಸಹಕರಿಸುತ್ತಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷ ಈ ರಸ್ತೆ ಪಕ್ಕದಲ್ಲಿದ್ದ ಮರಗಳನ್ನು ಬೋಳಿಸಿದ ಕಾರಣ ಹತ್ತಾರು ಗಿಡಗಳು ಒಣಗಿ ಸತ್ತಿವೆ.
ಒಂದು ಮರ ಬೆಳೆಸಲು 8 ರಿಂದ 10 ವರ್ಷ ಕಾಯಬೇಕು. ಅದು ತನ್ನ ಜೀವಿತಾವಧಿಯಲ್ಲಿ ಮನುಷ್ಯನಿಗೆ ಕೋಟ್ಯಂತರ ರೂ.ಗಳಷ್ಟು ಪರೋಕ್ಷವಾಗಿ ಅನುಕೂಲ ನೀಡುತ್ತದೆ. ಕಡೇ ಪಕ್ಷ ಪ.ಪಂ ಗಿಡಗಳನ್ನು ನೆಟ್ಟು ಬೆಳೆಸುವುದಿರಲಿ ಬೆಳೆದ ಮರಗಳನ್ನು ಉಳಿಸಿಕೊಂಡರೆ ಸಾಕೆಂಬುದು ಇಲ್ಲಿನ ನಾಗರಿಕರ ಆಶಯವಾಗಿದೆ.