ರಿಪ್ಪನ್‌ಪೇಟೆ ; ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೇರಲುಮನೆ ಗ್ರಾಮದಲ್ಲಿ 21ನೇ ಶತಮಾನದಲ್ಲೂ ಇಲ್ಲಿನ ಜನರು ಹೊಂಡ-ಗುಂಡಿಯ ಕಲುಷಿತ ನೀರನ್ನು ಅಮೃತವನ್ನಾಗಿ ಕುಡಿಯುವಂತಾಗಿದೆ.
ಹೌದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಲಜೀವನ್ ಯೋಜನೆ ಅನುಷ್ಟಾನಗೊಂಡು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಮನೆಗೆ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ಗಂಗಾಜಲವನ್ನು ಪೂರೈಸುವ ಕಾಮಗಾರಿಯ ಹಂತದಲ್ಲಿ ಅಳವಡಿಸಲಾದ ಪೈಪ್ ಕಿತ್ತು ಹೋಗಿ ಎರಡ್ಮೂರು ತಿಂಗಳಾದರೂ ಕೂಡಾ ದುರಸ್ಥಿಗೊಳಿಸದೇ ನಿರ್ಲಕ್ಷ್ಯ ವಹಿಸಿರುವ ಕಾರಣ ನೇರಲುಮನೆ ಗ್ರಾಮಸ್ಥರು ಹೊಂಡ ಗುಂಡಿಯ ನೀರನ್ನು ಕುಡಿಯುವುದರೊಂದಿಗೆ ಅಡುಗೆ ಇನ್ನಿತರ ಬಳಕೆಗೂ ಬಳಸುವಂತಾಗಿದೆ.
ಈ ಬಗ್ಗೆ ಬಾಳೂರು ಗ್ರಾಮ ಪಂಚಾಯ್ತಿ ಗಮನಕ್ಕೆ ತರುವ ಮೂಲಕ ಸಮಸ್ಯೆಯ ಕುರಿತು ದೂರು ಸಲ್ಲಿಸಿದರೂ ಕೂಡಾ ಏನು ಪ್ರಯೋಜನವಾಗದೆ ನಿರ್ಲಕ್ಷö್ಯ ವಹಿಸಿದ್ದಾರೆಂದು ಗ್ರಾಮಸ್ಥರು ಮಾಧ್ಯಮದವರಲ್ಲಿ ತಮ್ಮ ನೋವನ್ನು ಹಂಚಿಕೊಂಡರು.
ಸುಮಾರು 30-35 ಬಡ ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಾವು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದು ಜಲಜೀವನ್ ಯೋಜನೆಯಡಿ ಪ್ರತಿಮನೆಗೂ ಕುಡಿಯುವ ಶುದ್ದ ನೀರು ಹರಿಸುವ ಜನಹಿತ ಯೋಜನೆಯಿಂದ ಪೈಪ್‌ಲೈನ್ ಅಳವಡಿಸಿ ಎರಡು ತಿಂಗಳು ಶುದ್ದ ನೀರು ಹರಿಸಿದರೆ ಹೊರತು ನಂತರದಲ್ಲಿ ಅಳವಡಿಸಲಾದ ಪೈಪ್ ಕಿತ್ತು ಹೋಗಿ ನೀರಿಲ್ಲದೆ ಹಳೆ ಗಂಡನ ಪಾದವೇ ಗತಿಯೆಂಬ ಗಾದೆ ಮಾತಿನಂತೆ ನಮ್ಮೂರಿನ ನಾಗರೀಕರಿಗೆ ಹೊಂಡ ಗುಂಡಿಯ ಕಲುಷಿತ ನೀರೇ ಅಮೃತವಾಗಿದೆ ಎಂದು ಗ್ರಾಮಸ್ಥರು ಮಾಧ್ಯಮದವರಲ್ಲಿ ವಿವರಿಸಿದರು.
ನೀರುಗಂಟಿಗೆ ವೇತನ ಬರುತ್ತಿಲ್ಲವಂತೆ !
ಗ್ರಾಮಸ್ಥರು ಹೇಳುವ ಪ್ರಕಾರ ಈ ಭಾಗದ ನೀರು ಗಂಟಿಗೆ ಕಳೆದ ಎರಡು ಮೂರು ತಿಂಗಳಿಂದ ವೇತನ ನೀಡಿಲ್ಲ ನನಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದು ಇದರಿಂದಾಗಿ ಕಿತ್ತು ಹೋದ ಜಲಜೀವನ ಯೋಜನೆಯ ಗಂಗಾಜಲ ಶುದ್ದ ಕುಡಿಯುವ ನೀರಿನ ಪೈಪ್ ದುರಸ್ಥಿ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ನೇರಲುಮನೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವರೆ ಕಾದು ನೋಡಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.