ಹೊಸನಗರ ; ಮಾಮ್‌ಕೋಸ್ ಸಂಸ್ಥೆಯಲ್ಲಿ ಗುಂಪು ವಿಮಾ ಸೌಲಭ್ಯ ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಗೆ ಅವಘಡಗಳ ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಮಹೇಶ ಹುಲ್ಕುಳಿ ಹೇಳಿದರು.
ತಾಲೂಕಿನ ಅರಮನೆಕೊಪ್ಪ ಗ್ರಾಮದ ಕೃಷಿಕ ಡಿ.ಟಿ.ಕೃಷ್ಣಮೂರ್ತಿ ಅವರ ತೋಟದಲ್ಲಿ ಕಾಳುಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ಮೃತಪಟ್ಟ ಕೂಲಿಕಾರ್ಮಿಕ ಕೃಷ್ಣ ಅವರ ಕುಟುಂಬದ ಸದಸ್ಯರಿಗೆ ಗುರುವಾರ ಇಲ್ಲಿನ ಮಾಮ್‌ಕೋಸ್ ಕಛೇರಿಯಲ್ಲಿ ಗುಂಪುವಿಮಾ ಯೋಜನೆಯಡಿ 6 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಸಂಸ್ಥೆಯು ತನ್ನ ಸದಸ್ಯರ ಹಿತ ಕಾಯುವಲ್ಲಿ ಶ್ರಮಿಸುತ್ತಿದೆ. ಇಡೀ ಸಹಕಾರಿ ಕ್ಷೇತ್ರದಲ್ಲಿ ಇಂತಹ ಗುಂಪುವಿಮಾ ಸೌಲಭ್ಯ ಮಾಮ್‌ಕೋಸ್ ಹೊರತುಪಡಿಸಿ ಬೇರೆಲ್ಲಿಯೂ ಇಲ್ಲ. ಗುಂಪುವಿಮಾ ಅಭಿರಕ್ಷೆ ಯೋಜನೆಯಡಿ ಸಂಸ್ಥೆಯ ಎಲ್ಲಾ ಸದಸ್ಯರೂ ನೊಂದಾವಣೆ ಮಾಡಬಹುದು. ಅತೀ ಕಡಿಮೆ ಮೊತ್ತದ ಪ್ರೀಮಿಯಂ ಕಟ್ಟಿದರೂ ಅವಘಡಗಳು ನಡೆದಾಗ ಪರಿಹಾರದ ಹಣ ಲಭ್ಯವಾಗುತ್ತದೆ ಅದು ಅಲ್ಲದೇ ಅಲ್ಪ ಅವಧಿಯಲ್ಲಿ ವಿಮಾ ಹಣದ ಚೆಕ್ ನಿಮ್ಮ ಕೈ ಸೇರಲಿದೆ. ಈ ಸೌಲಭ್ಯ ಯಾವುದೇ ಅಡಿಕೆ ಮಂಡಿಗಳಲ್ಲಾಗಲೀ ಅಥವಾ ಸರ್ಕಾರದಿಂದಲೂ ಸಿಗಬೇಕಾದರೆ ವರ್ಷಗಟ್ಟಲೇ ಕಾಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ನಿರ್ದೇಶಕ ಕೆ.ವಿ ಕೃಷ್ಣಮೂರ್ತಿ ಮಾತನಾಡಿ, ಸಂಘದ ಸದಸ್ಯರ ಮತ್ತು ಅವರ ಅವಲಂಬಿತ ಕೂಲಿ ಕಾರ್ಮಿಕರ ಗುಂಪು ವಿಮಾ ಅಭಿರಕ್ಷೆ ಯೋಜನೆ 2007-08 ರಿಂದ ಜಾರಿಗೆ ತಂದಿದ್ದು 2025-26ನೇ ಸಾಲಿಗೂ ಮುಂದುವರೆಸುತ್ತಿದೆ 70 ವರ್ಷದೊಳಗಿನವರಿಗೆ (ಸದಸ್ಯರು ಹಾಗೂ ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರು) ಅಪಘಾತವಾದಲ್ಲಿ ಮಾತ್ರ ಆಸ್ಪತ್ರೆಯ ಚಿಕಿತ್ಸಾ ಖರ್ಚು ಗರಿಷ್ಟ 1.50 ಲಕ್ಷ ರೂ. ವರೆಗೆ ಮತ್ತು ಅಂಬ್ಯುಲೆನ್ಸ್ ವೆಚ್ಚ 1 ಸಾವಿರ ನೀಡಲಾಗುತ್ತದೆ. ಅಪಘಾತವಾಗಿ ಮರಣ ಹೊಂದಿದಲ್ಲಿ ಸದಸ್ಯರಿಗೆ ಮತ್ತು ಅವಲಂಬಿತ ಕೂಲಿ ಕಾರ್ಮಿಕರಿಗೆ ಮರಣ ಪರಿಹಾರ ಗರಿಷ್ಟ 6 ಲಕ್ಷ ರೂ. ಮತ್ತು ಮೃತರನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು ಕನಿಷ್ಟ 2500 ರೂ. ಹಣವನ್ನು ನೀಡಲಾಗುತ್ತದೆ. ಈ ಸೌಲಭ್ಯವನ್ನು ಎಲ್ಲ ಮಾಮ್‌ಕೋಸ್ ಸದಸ್ಯರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕರಾದ ತಿಮ್ಮಪ್ಪ, ಧರ್ಮೇಂದ್ರ, ಶಾಖೆಯ ವ್ಯವಸ್ತಾಪಕ ಗಣಪತಿ, ಸಂಸ್ಥೆಯ ನೌಕರ ವರ್ಗದವರಾದ ಮಧುಸೂದನ್, ವಿದ್ಯಾಶ್ರೀ, ದಿವ್ಯ, ಲೀಲಾವತಿ, ದಯನಂದ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.