ಸಾಗರದಲ್ಲಿ ಬೀದಿ ನಾಯಿಗಳ ದಾಳಿ ; ಮೂರು ವರ್ಷದ ಬಾಲಕನಿಗೆ ಗಂಭೀರ ಗಾಯ

Written by Koushik G K

Updated on:

ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ದಾಳಿಯಿಂದ ಬಾಲಕನಿಗೆ ಮುಖ ಸೇರಿದಂತೆ ಹಲವೆಡೆ ಗಂಭೀರ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

WhatsApp Group Join Now
Telegram Group Join Now
Instagram Group Join Now

ಬಾಲಕನಿಗೆ ತೀವ್ರ ಗಾಯ

📢 Stay Updated! Join our WhatsApp Channel Now →

ಸಾಗರದ ಜನ್ನತ್ ನಗರದಲ್ಲಿ ತನ್ನ ಮನೆ ಮುಂದೆ ಆಟವಾಡುತ್ತಿದ್ದಾಗ, ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿ ಹಲವೆಡೆ ಕಚ್ಚಿ ಗಾಯಗೊಳಿಸಿವೆ. ಗಾಯಗೊಂಡ ಬಾಲಕನನ್ನು ತಂದೆ ರಶೀದ್ ತಕ್ಷಣ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಮಹಿಳೆಯ ಮೇಲೂ ದಾಳಿ

ಇದೇ ವೇಳೆ ಮತ್ತೊಬ್ಬ ಮಹಿಳೆಯ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆ ಬಳಿಕ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

ನಾಗರಿಕರ ಆಕ್ರೋಶ

ನಗರಸಭೆ ಬೀದಿ ನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಕಾರಣಕ್ಕೆ ಸ್ಥಳೀಯರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಿಕರು ಬೀದಿ ನಾಯಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

ಶಾಸಕರ ಆಪ್ತರಿಂದ ಆಂಬುಲೆನ್ಸ್ ನೆರವು

ಗಾಯಗೊಂಡ ಬಾಲಕ ಬಡ ಕುಟುಂಬದವನು ಎಂಬುದರಿಂದ, ಶಿವಮೊಗ್ಗಕ್ಕೆ ಕರೆದೊಯ್ಯಲು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಲ್ಲಿ ಅಡಚಣೆ ಉಂಟಾಯಿತು. ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಸಹಾಯಕ ಶ್ರೀನಿವಾಸ ಮೂರ್ತಿ ಅವರು ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕುವಂತೆ ಸಹ ಪ್ರಯತ್ನಿಸಿದ್ದಾರೆ.

ಸ್ಥಳೀಯರ ನೆರವು

ಘಟನೆಯಾಗುತ್ತಿದ್ದಂತೆಯೇ ಸಾಗರದ ಯುವಕರು ಆಟೋ ಸಿಖಂದರ್, ಅಮೀನ್, ಇಮ್ರಾನ್, ರತೀಬ್ ಸೇರಿದಂತೆ ಇತರರು ತುರ್ತು ನೆರವು ನೀಡಿದ್ದು, ಮಗುವನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದ್ದಾರೆ.

ನಗರಸಭೆಯ ಸ್ಪಷ್ಟನೆ

ಸಾಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ಕೇಳಿದಾಗ, ಸಾಗರ ನಗರಸಭೆಯ ಪರಿಸರ ಅಭಿಯಂತರ ಮಧನ್ ಪ್ರತಿಕ್ರಿಯೆ ನೀಡಿದರು. ಅವರು, “ಬೀದಿ ನಾಯಿಗಳನ್ನು ನಿಯಂತ್ರಿಸಲು ಟೆಂಡರ್ ಕರೆಯಲಾಗಿದೆ. ಇದೇ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕ್ರಮ ಜಾರಿಯಾಗಲಿದೆ” ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು, “ನಾಯಿ ದಾಳಿಗಳು ನಡೆಯುತ್ತಿರುವಾಗಲೂ ನಗರಸಭೆ ಕ್ರಮಕ್ಕೆ ವಿಳಂಬ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪ್ರತಿಭಟನೆ

ಈ ಘಟನೆ ಹಿನ್ನೆಲೆ ಇಂದು ಬೆಳಗ್ಗೆ 11.30ಕ್ಕೆ ಸಾಗರದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಸಲಾಗುವುದು. “ಗಾಯಗೊಂಡ ಬಾಲಕನ ಚಿಕಿತ್ಸಾ ವೆಚ್ಚವನ್ನು ನಗರಸಭೆ ಭರಿಸಬೇಕು ಹಾಗೂ ಪರಿಹಾರ ನೀಡಬೇಕು” ಎಂಬುದಾಗಿ ಒತ್ತಾಯಿಸಲಾಗುವುದು. ನಗರಸಭೆಯ ಸದಸ್ಯ ಶಹೀನ್ ಬಾನು ಸಹ ಈ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.

ಗಣಪತಿ ವಿಸರ್ಜನೆ ವೇಳೆ ಗಾಯಗೊಂಡ ವ್ಯಕ್ತಿ ; ಆರೋಗ್ಯ ವಿಚಾರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು

Leave a Comment