ಹೊಸನಗರ ; ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು ನಮ್ಮ ಸಮಾಜದವರು ಬಿಲ್ಲವ ಎಂದೇ ನಮೂದಿಸಬೇಕು ಎಂದು ಹೊಸನಗರ ಬಿಲ್ಲವ ಸಮಾಜದ ಅಧ್ಯಕ್ಷೆ ಸುಮತಿ ಆರ್. ಪೂಜಾರ್ ತಿಳಿಸಿದರು.
ಬಿಲ್ಲವ ಸಮಾಜದ ಅನೇಕರು ಬಿಲ್ಲವ, ಈಡಿಗ, ಪೂಜಾರಿ, ಹಳೆಪೈಕ ಹೀಗೆ ಹೇಳಿ ಬರೆಸಿಕೊಂಡಿದ್ದಾರೆ. ಅದನ್ನು ಬಿಟ್ಟು ಬಿಲ್ಲವ ಎಂದೇ ಬರೆಸಬೇಕು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.
ಈ ಹಿಂದೆ ಸರ್ಕಾರದ ಗೆಜೆಟ್‌ನಲ್ಲಿ ಪೂಜಾರಿ ಎಂಬ ಜಾತಿಸೂಚಕ ಪದ ಬಿಟ್ಟು ಹೋಗಿದ್ದು ಪೂಜಾರಿ ಎಂಬ ಹೆಸರಿನಲ್ಲಿ ನೊಂದಾಯಿಸಿದ್ದ ರಾಜ್ಯದ ಅನೇಕರಿಗೆ ಸರ್ಟಿಫಿಕೇಟ್ ಸಿಗದಂತಾಗಿತ್ತು. ಆ ದಿನಗಳಲ್ಲಿ ಹೊಸನಗರ ಬಿಲ್ಲವ ಸಮಾಜ, ಶಿವಮೊಗ್ಗಕ್ಕೆ ಬಂದಿದ್ದ ಆಯೋಗದ ಮುಂದೆ ಅಹವಾಲು ಸಲ್ಲಿಸಿ ಎರಡೇ ತಿಂಗಳಲ್ಲಿ ಪೂಜಾರಿ ಎಂಬ ಹೆಸರು
ಗೆಜೆಟ್‌ನಲ್ಲಿ ಸೇರ್ಪಡೆಯಾಗಲು ಶ್ರಮಿಸಿತ್ತು.
ಮನೆಗೆ ಬರುವ ಸಮೀಕ್ಷಕರ ಮುಂದೆ ನೀವು ಕೊಡುವ ಮಾಹಿತಿಯ ಜೊತೆಗೆ ಬಿಲ್ಲವ ಎಂದೇ ನಾವೆಲ್ಲರೂ ನಮೂದಿಸುವ ಮೂಲಕ ಸಮಾಜದ ಮುಂಬರುವ ನಮ್ಮ ಭಾವಿ ಜನಾಂಗಕ್ಕೆ ಧೈರ್ಯ ನೀಡೋಣ. ಮುಂದಿನ ದಿನಗಳಲ್ಲಿ ಸರ್ಕಾರಗಳು ಒಳಮೀಸಲಾತಿ ಪ್ರಕ್ರಿಯೆ ಆರಂಭಿಸಿದಾಗ ಈಡಿಗ ಸಮೂಹದಲ್ಲಿ ಇರುವ ಒಳಜಾತಿಗಳಿಗೂ ಒಳಮೀಸಲು ಸಿಕ್ಕು ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದು ಆಶಿಸಿದರು.
ಹಿಂದಿನ ಶಾಲಾ ದಾಖಲೆ, ಜಾತಿಪತ್ರಗಳು ಹೇಗೆ ಇರಲಿ. ಮುಂದಿನ ಎಲ್ಲಾ ದಾಖಲೆಗಳು ಬಿಲ್ಲವ ಜಾತಿ ಹೆಸರಿನಲ್ಲಿ ಇರಲಿ. ಸಮಾಜದವರು ಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ಅಳವಡಿಸಿಕೊಳ್ಳೋಣ. ಶಿಕ್ಷಣದಿಂದ ಸ್ವತಂತ್ರವಾಗಿ, ಸಂಘಟನೆಯಿಂದ ಬಲವಾಗೋಣ ಎಂದರು.
ಗೋಷ್ಠಿಯಲ್ಲಿ ಚಂದ್ರು ದೇವಪ್ಪ, ಶಾಂತಮೂರ್ತಿ ಸಂಕೂರು, ಸುಬ್ರಹ್ಮಣ್ಯ ಮತ್ತಿಮನೆ, ಉದಯ ಪೂಜಾರಿ, ರಾಮಕೃಷ್ಣ ಪೂಜಾರಿ, ಶುಭಕರ ಪೂಜಾರಿ, ರಾಮಚಂದ್ರ ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.