ಹೊಂಬುಜ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಐದನೇಯ ದಿನ ಭಕ್ತರು ಶ್ರೀ ಪದ್ಮಾವತಿ ದೇವಿ ಸಹಸ್ರಮಾನ ಸ್ತುತಿಸಿ, ಪ್ರಾರ್ಥನೆ ಸಲ್ಲಿಸಿದರು.
ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು “ದೇವರ ಸಹಸ್ರನಾಮ ಸ್ತುತಿಸುವುದರಿಂದ ಆಧ್ಯಾತ್ಮಿಕ ಸತ್ಪರಿಣಾಮವು ಶಾಂತಿ-ನೆಮ್ಮದಿಯನ್ನುಂಟು ಮಾಡುವುದು. ಉತ್ತಮ ಭಾವನೆಗಳು ಜೀವನದ ಕಷ್ಟ, ದುಃಖಗಳನ್ನು ನಿವಾರಿಸಿ, ಧನಾತ್ಮಕ ಚಿಂತನದತ್ತ ಪ್ರೇರೇಪಿಸುವುದು” ಎಂದು ತಿಳಿಸುತ್ತಾ, ಭಕ್ತರನ್ನು ಹರಸಿ, ಶ್ರೀಫಲ ಮಂತ್ರಾಕ್ಷತೆ ನೀಡಿದರು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕವನ್ನು ಜಿನನಾಮ ಜಯಘೋಷಗಳೊಂದಿಗೆ ಸನ್ನಿಧಿಗೆ ತರಲಾಯಿತು. ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ಜಿನಾಗಮೋಕ್ತ ವಿಧಾನದಲ್ಲಿ ಪೂಜೆಗಳು ನೆರವೇರಿದುವು. ಭಕ್ತರು ಲಕ್ಷಹೂವಿನ ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಊರ ಪರವೂರ ಭಕ್ತವೃಂದ, ಶ್ರೀ ಪದ್ಮಾವತಿ ಮಹಿಳಾ ಸಮಾಜ, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀಕ್ಷೇತ್ರದ ಜಿನಮಂದಿರಗಳ ದರ್ಶನ ಪಡೆದರು.

ಸೇವಾಕರ್ತರಾದ ಗುಡಗಾಂವ್ನ ಶ್ರೀಮತಿ ನೀತು ಶ್ರೀ ನವೀನ್ ಜೈನ್ ಪೂಜಾ ವಿಧಾನಗಳಲ್ಲಿ ಭಾಗವಹಿಸಿದ್ದರು. ರಾತ್ರಿ ಅಷ್ಟಾವಧಾನ ಮೂಲಕ ಪರಂಪರಾನುಗತ ಉತ್ಸವ, ಪೂಜೆ, ಪ್ರಸಾದ ವಿತರಣೆಯಾಯಿತು. ಜಿನಮಂದಿರ ಸಮುಚ್ಛಯವು ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಶೋಭಿಸಿದವು.

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ.

ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.