ಶಿವಮೊಗ್ಗ, ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ):ಸಾಧನೆಗೆ ಮನಸ್ಸು ಮತ್ತು ದೇಹದ ನಿಯಂತ್ರಣ ಅತ್ಯಗತ್ಯ. ನಮ್ಮ ವಶದಲ್ಲಿದ್ದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಮನಸ್ಸು-ದೇಹ ವಶದಲ್ಲಿಲ್ಲದಿದ್ದರೆ ಯಾವುದೇ ಸಾಧನೆಯೂ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ನಡೆಯುತ್ತಿರುವ *‘ನವರಾತ್ರ ನಮಸ್ಯಾ’*ದ ಐದನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮನಸ್ಸು-ದೇಹ ನಿಯಂತ್ರಣದ ಅಗತ್ಯ
“ಇಂದು ಮನುಷ್ಯ ಜಗತ್ತನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕೆಂದು ಬಯಸುತ್ತಾನೆ. ಆದರೆ ತನ್ನ ಮನಸ್ಸನ್ನೇ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕ್ಷಣಕ್ಷಣಕ್ಕೂ ಚಂಚಲವಾಗುವ ಮನಸ್ಸನ್ನು ಹಿಡಿದಿಡಲು ಮನುಷ್ಯ ವಿಫಲವಾಗಿದ್ದಾನೆ. ದೇಹದ ಆರೋಗ್ಯವನ್ನಾದರೂ ಕಾಪಾಡಿಕೊಂಡಿದ್ದಾನೆಯೆಂದು ಕೇಳಿದರೆ, ಉತ್ತರ ‘ಇಲ್ಲ’ ಆಗುತ್ತದೆ. ಹೀಗಿರುವಾಗ ಬೇರೆಯದನ್ನು ವಶಪಡಿಸಿಕೊಳ್ಳಲು ಬಯಸುವುದು ವಿಪರ್ಯಾಸ,” ಎಂದು ಹೇಳಿದರು.
ಜಗನ್ಮಾತೆಯ ತತ್ವವನ್ನು ಉಲ್ಲೇಖಿಸಿದ ಅವರು, “ಜಗನ್ಮಾತೆ ಮಾತ್ರ ತನ್ನನ್ನು ತಾನು ವಶದಲ್ಲಿಟ್ಟುಕೊಳ್ಳುವುದಲ್ಲದೆ, ಜಗತ್ತನ್ನೇ ವಶದಲ್ಲಿಡಬಲ್ಲಳು” ಎಂದರು.
ತಾಯಿ-ಗುರು ತತ್ವ ಒಂದೇ
ತಾಯಿ ಮತ್ತು ಗುರುವಿನ ತತ್ವ ಒಂದೇ ಎಂದು ಸ್ವಾಮೀಜಿ ವಿವರಿಸಿದರು. “ವಾತ್ಸಲ್ಯವೇ ಅದರ ಮೂಲ. ತಾಯಿ ಹೃದಯವಿಲ್ಲದವರು ಗುರುರಾಗಲು ಸಾಧ್ಯವಿಲ್ಲ. ಗುರು ಒಲಿಯುವುದಕ್ಕೂ ತಾಯಿಯ ಆಶೀರ್ವಾದ ಅಗತ್ಯ” ಎಂದು ಹೇಳಿದರು.
ಸಮಾಜ ಗೌರವ ಸ್ವೀಕಾರ
ಕಾರ್ಯಕ್ರಮದ ಅಂಗವಾಗಿ ಜೋಗಿ ಸಮಾಜ, ಬಿಲ್ಲವ ಸಮಾಜ, ನಾಮದೇವ ಸಮಾಜ, ಒಕ್ಕಲಿಗ ಸಮಾಜ ಹಾಗೂ ನಾಮಧಾರಿ ಸಮಾಜಗಳ ಪರವಾಗಿ ಸಂಘದ ನಾಯಕರಾದ ಸತೀಶ್ ಜೋಗಿ, ಸುಂದರ್, ರಾಘವೇಂದ್ರ, ಗುಂಡಪ್ಪ ಗೌಡ ಮತ್ತು ಕೆ.ಎಸ್. ವೆಂಕಟೇಶ್ ಅವರು ಶ್ರೀಮಠದ ಪರವಾಗಿ ಕೊಡಿಸಿದ ಸಮಾಜ ಗೌರವವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಂ.ಎ.ಡಿ.ಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಆಶೀರ್ವಾದ ಪಡೆದರು. ಚಿತ್ರಕಲಾವಿದೆ ಶ್ರೀಲಕ್ಷ್ಮಿ ಪ್ರವಚನಕ್ಕೆ ಪೂರಕವಾಗಿ ಸ್ಥಳದಲ್ಲಿಯೇ ಚಿತ್ರರಚನೆ ಮಾಡಿ ಮೆಚ್ಚುಗೆಗೆ ಪಾತ್ರರಾದರು.
ನವರಾತ್ರಿ ಕಾರ್ಯಕ್ರಮಗಳು
ಈ ಸಂದರ್ಭ ನವರಾತ್ರ ನಮಸ್ಯಾ ಸಮಿತಿಯ ಶಿವರಾಮಯ್ಯ, ಲಕ್ಷ್ಮಿನಾರಾಯಣ ಸಂಪ, ಅಶೋಕ ಅತ್ತಿಸರ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಎಂಜಿ, ರಾಮಚಂದ್ರ, ಸುಬ್ರಮಣ್ಯ ಐಸಿರಿ, ಶ್ರೀನಾಥ ಸಾರಂಗ, ರವಿ ಕೈತೋಟ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಲಲಿತಾ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆದರೆ, ಸಂಜೆ ದುರ್ಗಾದೀಪ ನಮಸ್ಕಾರ ಹಾಗೂ ರಾಜರಾಜೇಶ್ವರಿ ಪೂಜೆ ನೆರವೇರಿತು.
ಪೌರ ಕಾರ್ಮಿಕರು, ರೈತರು, ಸೈನಿಕರು ದೇವರ ಸುಪುತ್ರರು ; ಬೇಳೂರು ಗೋಪಾಲಕೃಷ್ಣ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650