ಹೊಂಬುಜ ; “ಶ್ರೀ ಸರಸ್ವತಿ ದೇವಿ ಪ್ರತಿಯೋರ್ವರ ವಿದ್ಯಾಭ್ಯಾಸದ ಅಭ್ಯುದಯಕ್ಕೆ ಸದಾ ಹರಸುವ ವಿದ್ಯಾದೇವತೆ. ನವರಾತ್ರಿಯಲ್ಲಿ ಸರಸ್ವತಿ ಶ್ರೀ ಶಾರದಾ ಮಾತೆಯ ಸ್ತ್ರೋತ್ರ ಪಠಣದಿಂದ ಪ್ರಕೃತ್ತಿದತ್ತ ಫಲ-ಪುಷ್ಪಗಳಿಂದ ಹಾಗೂ ನವಿಲು ಗರಿಗಳಿಂದ ಅಲಂಕರಿಸುವುದು ಪ್ರಾಚೀನ ಪರಂಪರೆಯಾಗಿದೆ” ಎಂದು ಹೊಂಬುಜ ಜೈನಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ನವರಾತ್ರಿಯ ಶ್ರೀ ಸರಸ್ವತಿ ದೇವಿ ಪೂಜಾ ಸಂದರ್ಭದಲ್ಲಿ ತಿಳಿಸಿದರು.

“ನಮ್ಮೆಲ್ಲರ ಇಷ್ಟಾರ್ಥ ನೆರವೇರಿಸಲು ಶ್ರೀ ಸರಸ್ವತಿ ದೇವಿ ಉತ್ತಮ ವಿದ್ಯೆಯನ್ನೀಡಲೆಂದು ಪ್ರಾರ್ಥಿಸುವುದು ಔಚಿತ್ಯಪೂರ್ಣವಾಗಿದೆ. ಉತ್ತಮ ಸಂಸ್ಕಾರದ ಶಿಕ್ಷಣ ಪಡೆದು ರಾಷ್ಟ್ರ ಸೇವಕರಾಗಲು ಶ್ರೀಮಾತೆ ಹರಸಲಿ” ಎಂದು ಶ್ರೀಗಳವರು ಆಶೀರ್ವದಿಸಿದರು.

ಅತಿಶಯ ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತಿಯಿಂದ ಭಕ್ತವೃಂದ ದ್ರವ್ಯ ಕಾಣಿಕೆ ಸಮರ್ಪಿಸಿ ಪೂಜೆಯಲ್ಲಿ ಭಾಗಿಯಾದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀಕ್ಷೇತ್ರಪಾಲ ಶ್ರೀ ನಾಗಸನ್ನಿಧಿಯಲ್ಲಿ ಪರಂಪರಾನುಗತ ಪೂಜಾ ವಿಧಿಗಳು ನೆರವೇರಿದವು.

ಸೇವಾಕರ್ತರಾದ ವೀಣಾ ಜೈನ್, ಮನಿಷ್ ನೇಹಾ ಜೈನ್, ಜ್ಞಾನವೀ ರಿಷಭ್ ಜೈನ್, ಊರ ಪರವೂರ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಜಿನವಾಣಿ ಪೂಜೆಯಲ್ಲಿ ಪಾಲ್ಗೊಂಡರು. ಅಷ್ಟಾವಧಾನ ಸಹಿತ ಪೂಜಾ ಕೈಂಕರ್ಯಗಳು ಸಾಂಗವಾಗಿ ಜರುಗಿತು.

ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.



ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.