ಹೊಂಬುಜ : ಶ್ರೀ ಮಹಾವೀರ ಶಕ ವರ್ಷ 2551ನೇ ಶ್ರೀ ವಿಶ್ವಾವಸು ನಾಮ ಸಂವತ್ಸರದ ವಿಜಯದಶಮಿ ಸುದಿನ ಪರ್ವಾಚರಣೆಯು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಅಧಿದೇವತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ ವಿಧಿಪೂರ್ವಕ ನೆರವೇರಿತು.

ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ಎಲ್ಲ ಜಿನಮಂದಿರಗಳಲ್ಲಿ ಅಷ್ಟವಿಧಾರ್ಚನೆ ಪೂಜೆಗಳು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಾದ್ಯಗೋಷ್ಠಿ, ಜಿನಭಜನೆ, ಜಿನವಾಣಿ ಸ್ತ್ರೋತ್ರ ಸ್ತುತಿಸುವುದರೊಂದಿಗೆ ಭಕ್ತಿಭಾವಗಳಿಂದ ಜರುಗಿತು.

“ವಿಜಯದಶಮಿಯಂದು ಮಕ್ಕಳ ಅಕ್ಷರಾಭ್ಯಾಸ ಓಂ ನಾಮದೊಂದಿಗೆ ಆರಂಭಿಸುವುದರಿಂದ ವಿದ್ಯಾಭ್ಯಾಸದಿಂದ ಉನ್ನತ ಸ್ಥಾನ-ಮಾನ-ಗೌರವ ಪ್ರಾಪ್ತಿಯಾಗಲಿದೆ” ಎಂದು ಸ್ವಸ್ತಿಶ್ರೀಗಳವರು ವಿಜಯದಶಮಿ ಧರ್ಮ ಸಂದೇಶ ಪ್ರವನಚದಲ್ಲಿ ತಿಳಿಸಿದರು.

“ಅಕ್ಷರಾಭ್ಯಾಸದಿಂದ ಅಸ್ತ್ರ ಶಸ್ತ್ರಗಳಿಂತಲೂ ಪ್ರಭಾವೀ ಶೈಕ್ಷಣಿಕ ಅಕ್ಷರ ಅಸ್ತ್ರವೆಂದಾಗಬೇಕು. ಜೀವನದಲ್ಲಿ ದೇವ-ಗುರು-ಹಿರಿಯರಿಗೆ ಗೌರವ ಅರ್ಪಿಸಿ, ಸ್ಮರಿಸುತ್ತಾ ವೈಯುಕ್ತಿಕ ಸಾಧನೆ ಯಶಸ್ವಿಯಾಗಲಿ, ರಾಷ್ಟ್ರ ಸೇವಕರಾಗಿ ಜನ್ಮಭೂಮಿಯ ಕ್ಷೇಮಾಭ್ಯುದಯಕ್ಕಾಗಿ ನಿಸ್ವಾರ್ಥ ಸೇವೆ ಸಮರ್ಪಿಸಲು ವಿಜಯದಶಮಿಯಂದು ಪ್ರಾರ್ಥಿಸುವುದು ಸ್ತುತ್ಯಾರ್ಹವಾದುದು” ಎಂದು ಶ್ರೀಗಳವರು ವಿವರಿಸಿದರು. ಭಕ್ತವೃಂದದವರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿದರು.

ಪೋಡೋಪಚಾರ ಪೂಜೆಯ ಬಳಿಕ ಅಕ್ಷರಾಭ್ಯಾಸವನ್ನು ಶ್ರೀಗಳವರು ಮಾಡಿಸಿದರು. ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ, ಸಹ ಪುರೋಹಿತರು ಪೂಜಾ ವಿಧಿಗಳನ್ನು ಪೂರ್ವ ಪರಂಪರೆಯಂತೆ ನೇರವೇರಿಸಿದರು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕ ತರಲಾಯಿತು. ಶ್ರೀ ನೇಮಿನಾಥ ತೀರ್ಥಂಕರರು, ಶ್ರೀ ಮಹಾವೀರ ತೀರ್ಥಂಕರ, ಶ್ರೀ ಆದಿನಾಥ ತೀರ್ಥಂಕರ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಪೂಜಾ ವಿಧಿ ಜರುಗಿತು.

ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗುದುಮ್ಮ, ಆಡಳಿತಾಧಿಕಾರಿ ಸಿ.ಡಿ. ಅಶೋಕಕುಮಾರ ಹಾಗೂ ಶ್ರೀಮಠದ ಸೇವಾವರ್ಗದವರು ನವರಾತ್ರಿ ಮತ್ತು ವಿಜಯದಶಮಿ ಪರ್ವಾಚರಣೆ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕಾಗಮಿಸಿ ಭಕ್ತವೃಂದದವರಿಗೆ ಸಹಕಾರ ನೀಡಿದರು.



ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.