ಶಿವಮೊಗ್ಗ

ಭೀಕರ ಅಪಘಾತ ; ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು !

ಶಿವಮೊಗ್ಗ ; ನಗರದ ಹೊರವಲಯದ ಗೋಂದಿಚಟ್ನಳ್ಳಿ ಗ್ರಾಮದ ಸಮೀಪ ಇಂದು ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಈ ಘಟನೆ ನಡೆದಿದೆ.

ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ಸಾಗುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಅಸಾದುಲ್ಲಾ (50), ಸಾದಿಕ್ (30) ಮತ್ತು ಫಿರೋಜ್ (22) ಮೃತ ದುರ್ದೈವಿಗಳು‌.

inshot_20251030_1511561815586653586595097038.jpg

ಮೃತರ ಪೈಕಿ ಅಸಾದುಲ್ಲಾ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದವರಾಗಿದ್ದು, ಸಾದಿಕ್ ಮತ್ತು ಫಿರೋಜ್ ಉತ್ತರ ಪ್ರದೇಶದ ಕಾರ್ಮಿಕರು ಎಂದು ತಿಳಿದು ಬಂದಿದೆ.

ಚಾಲಕ ಇರ್ಫಾನ್ ಎಂಬುವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕೆಲಸ ಮುಗಿಸಿ ವಾಪಸ್ ಶಿವಮೊಗ್ಗಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ನಿದ್ದೆ ಮಂಪರಿನಲ್ಲಿ ಚಾಲಕ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗಿದ್ದು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment