ಹೊಸನಗರ ; ಪಟ್ಟಣದ ಹೃದಯ ಭಾಗದಲ್ಲಿರುವ ಸುಮಾರು 50 ವರ್ಷ ಹಳೆಯ ಹೊಸನಗರ ಜನತೆಗೆ ಪ್ರತಿದಿನ ನೀರೊದಗಿಸುವ ಪಟ್ಟಣ ಪಂಚಾಯತಿಯ ನೀರಿನ ಟ್ಯಾಂಕ್ ಯಾರ ಬಲಿಗಾಗಿ ಕಾಯುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳೇ ಹೇಳಬೇಕು.
ಪಟ್ಟಣ ಪಂಚಾಯತಿ ಕಟ್ಟಡದ ಪಕ್ಕ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಛೇರಿ ಅಕ್ಕ-ಪಕ್ಕಗಳಲ್ಲಿ ಶಾಲೆಗಳು ಸಣ್ಣ-ಸಣ್ಣ ಅಂಗಡಿಗಳು ದಿನಕ್ಕೆ ನೂರಾರು ಜನರ ಓಡಾಟ ಇವೆಲ್ಲದರ ಮಧ್ಯೆ ಸುಮಾರು 50 ವರ್ಷಗಳ ಹಳೆಯ ಪಟ್ಟಣ ಪಂಚಾಯತಿಯ ದೊಡ್ಡ ನೀರಿನ ಟ್ಯಾಂಕ್ ಇದ್ದು ಅದರಲ್ಲಿ ಪ್ರತಿದಿನವೂ ನೀರು ಶೇಖರಿಸಲಾಗುತ್ತಿದ್ದು ಅದೇ ಟ್ಯಾಂಕ್ನಿಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮನೆಗಳಿಗೆ ನೀರೊದಗಿಸಲಾಗುತ್ತದೆ. ಆದರೆ ಆ ನೀರಿನ ಟ್ಯಾಂಕ್ ನೋಡಿದವರು ಯಾರು ಟ್ಯಾಂಕ್ ಹತ್ತಿರ ಹೋಗಲ್ಲ. ಈಗಲೋ-ಆಗಲೋ ಬೀಳುವ ಸಂಭವವಿದೆ. ಪಿಲ್ಲರ್ಗಳು ಒಡೆದಿದೆ, ಕೆಲವು ಕಡೆಗಳಲ್ಲಿ ಪಿಲ್ಲರ್ ರಾಡ್ ಗಳು ಕಾಣುತ್ತಿದೆ. ಬುಡ ಗಟ್ಟಿ ಇದ್ದಂತೆ ಕಾಣುತ್ತಿಲ್ಲ. ಆದರೂ ಈ ಟ್ಯಾಂಕ್ ಉರುಳಿಸುತ್ತಿಲ್ಲ ಏಕೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಾಣುತ್ತಿದೆ.
ಇನ್ನೂ ಒಂದೆರಡು ತಿಂಗಳಲ್ಲಿ ಈ ನೀರಿನ ಟ್ಯಾಂಕ್ ಉರುಳಿಸದಿದ್ದರೆ ನೂರಾರು ಜೀವಗಳು ಜೊತೆಗೆ ಪಟ್ಟಣ ಪಂಚಾಯತಿಯ ಕಟ್ಟಡ ಹಾಗೂ ತಾಲ್ಲೂಕು ಪಂಚಾಯತಿಯ ಕಟ್ಟಡ ನಾಶವಾಗುವುದರ ಜೊತೆಗೆ ಕೆಲಸ ಮಾಡುವ ನೌಕರ ವರ್ಗದವರಿಗೂ ಹಾನಿಯಾಗಲಿದೆ. ಸಂಬಂಧಪಟ್ಟ ಅಧಿಕಾರಿ ತಕ್ಷಣ ಪಟ್ಟಣ ಪಂಚಾಯತಿಯ ಜನರಿಗೆ ಬದಲಿ ನಲ್ಲಿ ನೀರಿನ ವ್ಯವಸ್ಥೆ ಮಾಡಿ ಶೀಘ್ರದಲ್ಲಿ ನೀರಿನ ಟ್ಯಾಂಕ್ ಉರುಳಿಸಲಿ ಎನ್ನುವುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯ.
ನಾವು ಈಗಾಗಲೇ ಕರ್ನಾಟಕ ಒಳ ಚರಂಡಿ ನೀರು ಸರಬರಾಜು ಇಲಾಖೆ ಸಾಗರರವರ ಗಮನಕ್ಕೆ ತರಲಾಗಿದೆ. ಅವರು ಎಂ-ಸಿ.ವಿ.ಕೆ ಕಂಟ್ರಾಕ್ಟರ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿ ಅವರಿಗೆ ಮಾರ್ಚ್ 21 2025ರಲ್ಲಿ ಟೆಂಡರ್ ಪಡೆದುಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಹೊಸ ನೀರಿನ ಟ್ಯಾಂಕ್ ನಿರ್ಮಾಣ ಹಾಗೂ ಹಳೆಯ ನೀರಿನ ಟ್ಯಾಂಕ್ ಉರುಳಿಸಲು ಬಂದಿಲ್ಲ. ಪುನಃ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ.
– ಹರೀಶ್, ಮುಖ್ಯಾಧಿಕಾರಿ

ನೀರಿನ ಟ್ಯಾಂಕ್ ಅಪಾಯದಲ್ಲಿ ಇರುವುದು ನಿಜ. ಶೀಘ್ರದಲ್ಲಿಯೇ ಬೇರೆ ಸ್ಥಳದಲ್ಲಿ ಹೊಸ ನೀರಿನ ಟ್ಯಾಂಕ್ ನಿರ್ಮಿಸಿ ಈ ಟ್ಯಾಂಕ್ ಉರುಳಿಸುತ್ತೇವೆ.
– ಭರತ್ರಾಜ್, ತಹಸೀಲ್ದಾರ್ ಹೊಸನಗರ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





