ರಿಪ್ಪನ್‌ಪೇಟೆ ; ನ. 23ರಂದು ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಭವ್ಯವಾಗಿ ನಡೆದ ನವೋದಯ ಹಬ್ಬ – 2025, ದಶಮಾನೋತ್ಸವದ ಸಮಾರಂಭದಲ್ಲಿ, ನವೋದಯ & ಮೊರಾರ್ಜಿ ಉಚಿತ ತರಬೇತಿ ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯಿಸ್‌ಗೆ ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ‘ನವೋದಯ ಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ನಿರ್ಮಿಸಲು ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ನವೋದಯ ಕುಟುಂಬ ಅತ್ಯಂತ ಹೆಮ್ಮೆಯಿಂದ ಸ್ಮರಿಸಿದೆ.
10ನೇ ವರ್ಷದ ನವೋದಯ ಹಬ್ಬದ ದಶಮಾನೋತ್ಸವ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ನಗರ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಕಿರಣ್.ಎಸ್, ಇನ್ಸೆಟ್ಸ್ ಅಕಾಡೆಮಿ ಸಂಸ್ಥಾಪಕ ವಿನಯಕುಮಾರ್, ಉದ್ಯಮಿ ಆರ್. ಡಿ.ಯಾದವ್ ಉದ್ಘಾಟಿಸಿದರು.

ವಿದ್ಯಾವಾಹಿನಿ ಸಂಸ್ಥೆಯ ಪ್ರದೀಪ್, ನಟ ನಾಗಭೂಷಣ್, ನಟ ಮತ್ತು ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಮಂಜುನಾಥ್
ಹಳ್ಳೂರು, ಜೈಪುರ ಸೀತಾರಾಮ್ ಅತಿಥಿಗಳಾಗಿ ಆಗಮಿಸಿದ್ದರು. ಪಿ.ಸೋಮೇಶ್ ನವೋದಯ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮ್ಮಿಲನ ಭಾವನಾತ್ಮಕ ಬೆಸುಗೆ ಬೆಸೆಯಿತು.

ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ, ಕಾಶ್ಮೀರ, ಆಂಧ್ರಪ್ರದೇಶ, ಕೇರಳ, ಗೋವಾ, ಪಂಜಾಬ್ ಸೇರಿದಂತೆ ದೇಶದ ವಿವಿಧ ನವೋದಯ ಹಿರಿಯ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ರಾಜ್ಯದ ಎಲ್ಲ ಜಿಲ್ಲೆಗಳಿಂದ 1800 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಸಂತೋಷ, ಅಚ್ಚರಿ ಹಾಗೂ ಸಂಭ್ರಮಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ದೇಶದ ಎಲ್ಲಾ ನವೋದಯ ಶಾಲೆಗಳ ಹಳೆಯ ವಿದ್ಯಾರ್ಥಿ ಬಳಗದಲ್ಲಿ, ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ, ರಕ್ಷಣಾ ಪಡೆ / ಸಶಸ್ತ್ರ ಪಡೆ, ಕಲೆ, ಸಂಸ್ಕೃತಿ ಮತ್ತು ಚಿತ್ರರಂಗ, ನಾಗರಿಕ ಸೇವೆ, ಉದ್ಯಮಶೀಲತೆ, ಆರ್ಥಿಕ ಸೇವೆ, ಕಾನೂನು ಸೇವೆ ಸಾಹಿತ್ಯ ಸಾರ್ವಜನಿಕ ಸೇವೆ / ಜನಸೇವೆ, ಸಂಶೋಧನೆ ಮತ್ತು ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ, ಕ್ರೀಡೆ ಸಾಧನೆ ಮಾಡಿದ ಸಾಧಕರಿಗೆ ನವೋದಯ ಭೂಷಣ ಮತ್ತು ನವೋದಯ ಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶಿವಮೊಗ್ಗ ನವೋದಯದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ “ನವೋದಯ ರತ್ನ” ಪ್ರಶಸ್ತಿ ಕೂಡ ಪ್ರಕಾಶ್ ಜೋಯಿಸ್ ಅವರಿಗೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಜೋಯಿಸ್, ‘ನವೋದಯ ಭೂಷಣ’ ಪ್ರಶಸ್ತಿ ದೊರಕಿರುವುದು ವ್ಯಕ್ತಿಗತ ಗೌರವ ಮಾತ್ರವಲ್ಲ ಸಮಾಜಕ್ಕೆ ಕೊಡುವುದೇ ನಮ್ಮ ಧರ್ಮ ಎನ್ನುವ ಪ್ರತಿಯೊಂದು ಹಳೆ ನವೋದಯ ವಿದ್ಯಾರ್ಥಿಗಳಿಗೆ ದೊರೆತ ಗುರುತಾಗಿದೆ. ನಾನು ಏನಾಗಿದ್ದರೂ ಅದು ನವೋದಯ ನೀಡಿದ ಮೌಲ್ಯಗಳೇ ಕಾರಣ. ಈ ಪ್ರಶಸ್ತಿಯನ್ನು ಶಿಬಿರದ ಪ್ರತಿ ಕಾರ್ಯದ ಜೊತೆಗೆ ನಿಂತು, ಎಲ್ಲರನ್ನು ಪ್ರೇರೇಪಿಸಿ, ಆಶೀರ್ವಾದಿಸಿದ ಹುಂಚ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಚರಣಕ್ಕೆ ಸಮರ್ಪಿಸುವೆ ಎಂದರು.

ಹಾಗೆ “ಈ ಗೌರವನ್ನು ನನ್ನ ಶಿಕ್ಷಕರು, ನಮ್ಮೊಂದಿಗೆ ನಿಲ್ಲುವ ಎಲ್ಲಾ ಶಿಬಿರದ ಸಂಚಾಲಕರು, ಶಿಕ್ಷಕರು, ಪೋಷಕರು ಮತ್ತು ನಮ್ಮನ್ನು ನಂಬಿ ಬಂದ ಪ್ರತಿಯೊಂದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮರ್ಪಿಸುತ್ತೇನೆ. ಅವರ ಯಶಸ್ಸು ನನ್ನ ನಿಜವಾದ ಪ್ರಶಸ್ತಿ.” “ನನ್ನ ಕನಸು ಒಂದು ಗ್ರಾಮಕ್ಕೆ ಜನಿಸಿದ್ದು, ಬಡತನದಲ್ಲಿ ಬೆಳೆದದ್ದು ಯಾರ ಭವಿಷ್ಯವನ್ನೂ ತಡೆಯಬಾರದು. ಪ್ರತಿಭೆಯಿರುವ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ತಲುಪುವವರೆಗೆ ನಮ್ಮ ಸೇವೆ ನಿಲ್ಲುವುದಿಲ್ಲ” ಎಂದರು.
ಶಿಬಿರದ ಹಿನ್ನೆಲೆ :
ಶಿವಮೊಗ್ಗ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯ ಮತ್ತು ಮಿಲನ ಅಲ್ಯೂಮ್ನಿ ಅಸೋಸಿಯೇಷನ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ನವೋದಯ & ಮೋರಾರ್ಜಿ ಉಚಿತ ತರಬೇತಿ ಶಿಬಿರ ಗ್ರಾಮೀಣ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಿರುವ ಮಹತ್ತರ ಶಿಕ್ಷಣ ಚಳವಳಿಯಾಗಿದೆ.

ಈ ಶಿಬಿರವು
🔹 2021ರಲ್ಲಿ ಹುಂಚದಲ್ಲಿ ಕೋವಿಡ್ ಸಮಯದಲ್ಲಿ ಆರಂಭಗೊಂಡು,
🔹 2023ರಲ್ಲಿ ಕೋಣಂದೂರು ಮತ್ತು ನೆಲವಾಗಿಲು,
🔹 2025ರಲ್ಲಿ ತಾಗರ್ತಿಗೆ ವಿಸ್ತರಿಸಿದೆ.
ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಿಸಿ, ನವೋದಯ–ಏಕಲವ್ಯ–ಮೋರಾರ್ಜಿ ಮೊದಲಾದ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕಿಸುವುದು ಈ ಶಿಬಿರದ ಪ್ರಮುಖ ಗುರಿಯಾಗಿದೆ.
ಈ ಸಂಸ್ಥೆಯನ್ನು ಪ್ರಕಾಶ್ ಜೋಯಿಸ್ (ಸಂಸ್ಥಾಪಕ), ರಮ್ಯಾ ರಾವ್, ಪುನೀತ್ ಹೆಚ್.ಎನ್., ಡಾ. ಸುನಿಲ್ ಕುಮಾರ್ ಕೆ.ಎಂ., ಶ್ರೀನಾಥ್ ನಾಡಿಗ್ ಮತ್ತು ಸಂಜಯ್ ಸೇರಿದಂತೆ ಅನೇಕ ಹಳೆ ನವೋದಯ ವಿದ್ಯಾರ್ಥಿಗಳು ಶ್ರದ್ಧೆಯಿಂದ ಮುನ್ನಡೆಸುತ್ತಿದ್ದಾರೆ.
4 ವರ್ಷಗಳಲ್ಲಿ ಸಾಧನೆಗಳು
✔ 375 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
✔ 12 ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆ
✔ 2 ವಿದ್ಯಾರ್ಥಿಗಳು ಏಕಲವ್ಯಕ್ಕೆ ಆಯ್ಕೆ
✔ 78 ವಿದ್ಯಾರ್ಥಿಗಳು ಮೋರಾರ್ಜಿ ದೇಸಾಯಿ ಶಾಲೆಗಳಿಗೆ ಆಯ್ಕೆ
✔ ₹2.98 ಕೋಟಿ ಮೌಲ್ಯದ ಶಿಕ್ಷಣ ಸೌಲಭ್ಯಗಳ ಪ್ರಯೋಜನ ಗ್ರಾಮೀಣ ಮಕ್ಕಳಿಗೆ
“Give Back to Society” ತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅನೇಕ ಕುಟುಂಬಗಳ ಬದುಕು ಬದಲಿಸುತ್ತಿದೆ.
ಮುಂದಿನ ಗುರಿ :

ಈ ಶಿಬಿರದ ವಿಸ್ತರಣೆಯಿಂದ ಮುಂದಿನ ವರುಷಗಳಲ್ಲಿ ಇನ್ನೂ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ದಾರಿ ತೆರೆದುಕೊಳ್ಳಲಿದೆ. ಈ ತಂಡವು “ನವೋದಯ ವಿಷನ್ 2125” ಎನ್ನುವ ಗುರಿ ಇಟ್ಟುಕೊಂಡು ಹೈದ್ರಾಬಾದ್ ನವೋದಯ ಪ್ರಾಂತ್ಯದ 77 ನವೋದಯಗಳ ಹಳೆ ವಿದ್ಯಾರ್ಥಿಗಳಿಗೆ, ಶಿಬಿರದ ಅಗತ್ಯತೆ ಬಗ್ಗೆ ಅರಿವು ಮೂಡಿಸಿ, ಅರ್ಹ ಮಕ್ಕಳಿಗೆ ನವೋದಯ ಶಾಲೆಯಲ್ಲಿ ತೇರ್ಗಡೆ ಮಾಡಿಸುವ ಪ್ರಯತ್ನ ಮಾಡುತ್ತಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.




