ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತು ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ಫೆ.12ಕ್ಕೆ ಪೂರ್ವಭಾವಿ ಸಭೆ : ಕಲಗೋಡು ರತ್ನಾಕರ್

Written by Mahesha Hindlemane

Published on:

ಹೊಸನಗರ ; ತಾಲೂಕಿನಲ್ಲಿ ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತ ಬಂದಿದೆ. ಹೊಸನಗರ ತಾಲೂಕು ಕೇಂದ್ರವು ಈ ಹಿಂದೆ ವಿಧಾನಸಭಾ ಕ್ಷೇತ್ರದ ಮಾನ್ಯತೆ ಸಹ ಹೊಂದಿತ್ತು. ಆದರೆ ಇಂದು ತಲಾ ಎರಡು ಹೋಬಳಿ ಸಾಗರ ಕ್ಷೇತ್ರಕ್ಕೆ ಹಾಗು ತೀರ್ಥಹಳ್ಳಿ ಕ್ಷೇತ್ರಕ್ಕೆ ಹರಿದು ಹಂಚಿಕೆಯಾಗಿ ಇಂದಿಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿವೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ತಾಲೂಕಿನ ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೊಸನಗರ ಪಟ್ಟಣದ ಕೇಂದ್ರ ಸ್ಥಾನದಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸುವ ಸದುದ್ದೇಶವಿದೆ ಎಂದರು.

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ಈ ವಿಚಾರವಾಗಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಹಿಂದೆಯೇ, ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್  ಕ್ಷೇತ್ರ ಮರುಸ್ಥಾಪನೆಗೆ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ನಗರ ಗ್ರಾಮ ಪಂಚಾಯತಿ ಸದಸ್ಯ ಕರುಣಾಕರ ಶೆಟ್ಟಿ ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸೈಕಲ್ ಜಾಥಾದ ಮೂಲಕ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಈ ಕಾರಣ ಹೋರಾಟದ ಪೂರ್ವಭಾವಿ ಸಭೆಯನ್ನು ಫೆಬ್ರವರಿ 12 ಗುರುವಾರ ಬೆಳಗ್ಗೆ 10-30 ಗಂಟೆಗೆ ಸರಿಯಾಗಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಮೂಲೆಗದ್ದೆ ಮಠದ ಶ್ರೀಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಭೆಗೆ ತಾಲ್ಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಪಂಚಾಯತಿ, ತಾಲೂಕು ಹಾಗು ಗ್ರಾಮ ಪಂಚಾಯತಿಗಳ ಮಾಜಿ ಜನಪ್ರತಿನಿಧಿಗಳು, ರೈತಸಂಘ, ದಲಿತ ಸಮಿತಿ ಸದಸ್ಯರು, ಹೋರಾಟಗಾರರು, ಮಹಿಳಾ ಸಂಘಗಳು, ಕಾಲೇಜು ಮಟ್ಟದ ಆಸ್ತಕ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಸಮಸ್ತ ಜನತೆ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಆಗಮಿಸಿ ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಹಾಗು ಹೋರಾಟದ ಮುಂದಿನ ರೂಪುರೇಷೆ ಕುರಿತು ಚರ್ಚಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

Leave a Comment