ಗುಣಾತ್ಮಕ ಶಿಕ್ಷಣದಿಂದ ಮಾತ್ರವೇ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ; ಶಾಸಕ ಆರಗ ಜ್ಞಾನೇಂದ್ರ

0 499

ಹೊಸನಗರ : ಸುಸಂಸ್ಕೃತ, ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕ ವರ್ಗದ ಮೇಲಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಿ.ಎಂ.ಶ್ರೀ ಶಾಲೆಯ 2023-24ನೇ ಸಾಲಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹಲವಾರು ಶಿಕ್ಷಣಕ್ಕೆ ಪೂರಕ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಾದರಿ ಶಾಲೆ ಎಂಬಂತೆ ಹೊರಹೊಮ್ಮಿದೆ. ಶಾಲಾಭಿವೃದ್ದಿ ಸಮಿತಿ ಸದಸ್ಯರ ಈ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾಗಿದ್ದು ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಕಂಪ್ಯೂಟರ್ ನೆರವು ಕಲ್ಪಿಸಲಾಗುವುದು ಎಂದರು.

ಕಳೆದ ತಮ್ಮ ಶಾಸಕ ಅಧಿಯಲ್ಲಿ ಸುಮಾರು ರೂ. 10 ಲಕ್ಷ ಅನುದಾನವನ್ನು ಗ್ರಾಮದ ವಿವಿಧ ಸರ್ಕಾರಿ ಶಾಲೆಗಳ ಅಭಿವೃದ್ದಿ ಕಾರ್ಯಗಳಿಗಾಗಿ ನೀಡಿದ್ದು, ಮುಂದೆಯು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ದಾನಿಗಳು ಶಾಲೆಗಾಗಿ ನೀಡುವ ಪ್ರತಿಯೊಂದು ಪೈಸೆ ದೇವಾಲಯಕ್ಕೆ ನೀಡಿದ ದಾನದಂತೆ ಎಂದ ಅವರು, ಶಾಲೆ ಮತ್ತು ದೇವಸ್ಥಾನಗಳ ನಡುವೆ ಯಾವುದೇ ಬೇಧಬಾವವಿಲ್ಲ. ದಾನಿಗಳು ದೇವಸ್ಥಾನಕ್ಕೆ ನೀಡಿದ ದಾನದಷ್ಟೆ ಪುಣ್ಯ ಶಾಲೆಗೆ ನೀಡಿದ ದಾನದಿಂದ ಲಭಿಸಲಿದೆ ಎಂದರು.

ಇತ್ತೀಚೆಗೆ ಸುಶಿಕ್ಷಿತರೇ ಹೆಚ್ಚು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ ಆಗಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ‘ಕುಕ್ಕರ್ ಬಾಂಬ್’ ಸ್ಪೋಟವೇ ಇದಕ್ಕೆ ಸಾಕ್ಷಿ ಆಗಿದೆ. ಇಂತಹ ದುಶ್ಸೃತ್ಯಗಳಿಗೆ ದೇಶದ ಸತ್ಪçಜೆಗಳೆಲ್ಲಾ ಒಟ್ಟಾಗಿ ಇತಿಶ್ರೀ ಹಾಡಬೇಕಿದೆ. ಪ್ರಧಾನಿ ಮೋದಿ ದೇಶದ ಪ್ರಧಾನಿಯಾಗುವ ಮೊದಲು ಭಾರತ ವಿಶ್ವದ ಆರ್ಥಿಕ ಕ್ಷೇತ್ರದಲ್ಲಿ ಹತ್ತನೇ ಸ್ಥಾನ ಪಡೆದಿತ್ತು. ಆದರೆ, ಇಂದು ಐದನೇ ಸ್ಥಾನ ಪಡೆಯುವ ಮೂಲಕ ಆರ್ಥಿಕತೆ ಸುಧಾರಿಸುವತ್ತ ದಾಪುಗಾಲು ಹಾಕಿದೆ. ದೇಶದ ಸೈನಿಕರಿಗೆ ವಿವಿಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ವಿಶ್ವದ ನಾಲ್ಕನೇ ಬಲಿಷ್ಟ ರಾಷ್ಟ ಎಂಬ ಹೆಗ್ಗಳಿಕೆ ನಮ್ಮದು. ಜಗತ್ತಿನಲ್ಲಿ ಅತಿ ವಿಸ್ತಾರದ ರೈಲುಮಾರ್ಗ ಹೊಂದಿರುವ ಕೀತಿ ಭಾರತಕ್ಕೆ ಸಲ್ಲುತ್ತದೆ. ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು, ಮುಂಬೈನ ಸಮುದ್ರದ ಮೇಲ್ಭಾಗದಲ್ಲಿ ಸುಮಾರು 22 ಕಿ.ಮೀ ರಾಷ್ಟ್ರದ ಅತಿ ಉದ್ದದ ಮೇಲ್ಸೆತುವೆ ಲೋಕಾರ್ಪಣೆ ಗೊಂಡಿರುವುದು ಇಡೀ ದೇಶವೇ ಅಭಿವೃದ್ದಿ ಪಥದಲ್ಲಿದೆ ಎನ್ನುವಂತಾಗಿದೆ.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯೆ ಜ್ಯೋತಿ, ಲಕ್ಷ್ಣಣಗೌಡ, ಲಕ್ಷ್ಮಿದೇವಿ, ಬಿಇಓ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕಿ ಪಿ. ಶಾರದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಿನಾಥ್, ಸುಧೀರ್ ಶೆಟ್ಟಿ, ಸಿಆರ್‌ಪಿ ಸಂತೋಷ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಇದೇ ವೇಳೆ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ, ನೂತನ ಕಂಪ್ಯೂಟರ್ ಕೊಠಡಿ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಶಾಸಕ ಆರಗ ಜ್ಞಾನೇಂದ್ರ ವೀಕ್ಷಿಸಿದರು.

ಶಿಕ್ಷಕ ಗುರುಮೂರ್ತಿ ನಿರೂಪಿಸಿ, ಧರ್ಮಪ್ಪ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.