ಹೊಸನಗರ

ಬಸ್‌ಗೆ ಬೆಂಕಿ: ಹುಲಿಕಲ್ ಬಾಳೆಬರೆ ಘಾಟಿಯಲ್ಲಿ ತಪ್ಪಿದ ದುರಂತ – 36 ಪ್ರಯಾಣಿಕರು ಪಾರು

ಹುಲಿಕಲ್–ಬಾಳೆಬರೆ ಘಾಟಿಯ ಫಾಲ್ಸ್ ಸಮೀಪ ಮುಖ್ಯರಸ್ತೆಯಲ್ಲಿ ಇಂದು ಮಧ್ಯಾಹ್ನ 2.45 ಗಂಟೆ ಸುಮಾರಿಗೆ ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ದುರ್ಗಾಂಬಾ ಬಸ್‌ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ನಡೆದಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/r/1HsPwovczB/

ಘಟನೆ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಇಂಜಿನ್ ಭಾಗದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಇಡೀ ಬಸ್‌ನ್ನು ಅಗ್ನಿ ಆವರಿಸಿತು. ಈ ದೃಶ್ಯದಿಂದ ಪ್ರಯಾಣಿಕರು ಭಯಭೀತರಾಗಿದ್ದರೂ, ಎಲ್ಲರೂ ಸಮಯಕ್ಕೆ ಸರಿಯಾಗಿ ಬಸ್‌ನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ತೆರಳಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ವೇಳೆ ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಯಡೂರು ಭಾಗದ ವ್ಯಕ್ತಿಯೊಬ್ಬರು ಘಟನೆ ನೋಡಿ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಗ್ನಿ ಅವಘಡದ ನಿಖರ ಕಾರಣ ಹಾಗೂ ನಷ್ಟದ ವಿವರಗಳು ತಿಳಿದುಬರಬೇಕಿದೆ.

inshot_20260228_1713262942617666478058130603.jpg

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಕಡೆ ಬಸ್‌ಗಳಿಗೆ ಬೆಂಕಿ ತಗುಲುವ ಘಟನೆಗಳು ನಡೆಯುತ್ತಿರುವುದು ಗಮನಾರ್ಹ. ಈ ಹಿನ್ನೆಲೆ ಸಾರಿಗೆ ಇಲಾಖೆ ಹಾಗೂ ಬಸ್ ಮಾಲೀಕರು ಪ್ರಯಾಣಿಕರ ಸುರಕ್ಷತೆ ಕುರಿತು ಹೆಚ್ಚಿನ ಗಮನಹರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment